ಉದಯವಾಹಿನಿ , ಕೋಲಾರ: ವಿಶ್ವದಲ್ಲೇ ಎಲ್ಲಿಯೂ ಗುರುತಿಸಲಾಗದ ಅತಿ ಅಪರೂಪದ, ವಿಜ್ಞಾನಕ್ಕೆ ಸವಾಲಾದ ವಿಸ್ಮಯ ಸಂಗತಿಯೆಂಬಂತೆ ರಕ್ತದ ಗುಂಪೊಂದು ಕೋಲಾರ (Kolar) ಮೂಲದ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದೆ. ಕೋಲಾರದ ಆಸ್ಪತ್ರೆಯಲ್ಲಿ 38 ವರ್ಷದ ಮಹಿಳೆಯೊಬ್ಬರು ಹೃದಯ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮಹಿಳೆಯಲ್ಲಿ ಅತ್ಯಂತ ಅಪರೂಪದ ಓ ಆರ್‌ಹೆಚ್+ (O RH+) ರಕ್ತದ ಗುಂಪು ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆಗಾಗಿ ಜಾಲಪ್ಪ ಆಸ್ಪತ್ರೆಯ ನಾರಾಯಣ ಹೃದಯಾಲಯದ ವೈದ್ಯರು ಮಹಿಳೆಯ ರಕ್ತಕ್ಕೆ ಹೊಂದಿಕೆಯಾಗುವ ರಕ್ತಕ್ಕಾಗಿ ಹುಡುಕಾಟ ಆರಂಭಿಸಿದ್ದರು. ಓ-ಪಾಸಿಟಿವ್ ರಕ್ತ ಸೇರಿದಂತೆ ಯಾವುದೇ ರಕ್ತದ ಗುಂಪಿಗೂ ಮಹಿಳೆಯ ರಕ್ತಕ್ಕೂ ಹೊಂದಿಕೆಯಾಗಿಲ್ಲ. ಬಳಿಕ ಹೆಚ್ಚಿನ ತನಿಖೆಗಾಗಿ ಆಸ್ಪತ್ರೆಯು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದಲ್ಲಿರುವ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ರೆಫರೆನ್ಸ್ ಲ್ಯಾಬೊರೇಟರಿಗೆ ನೀಡಿತು. ಅಲ್ಲಿ ಸುಧಾರಿತ ಸೆರೋಲಾಜಿಕಲ್ ತಂತ್ರಗಳನ್ನು ಬಳಸಿಕೊಂಡು, ಅಲ್ಲಿನ ತಂಡ ಮಹಿಳೆಯ ರಕ್ತವು ಪ್ಯಾನ್ರಿಯಾಕ್ಟಿವ್ ಎಂದು ಗುರುತಿಸಿದೆ.
ಮಹಿಳೆಯ ರಕ್ತದ ಮಾದರಿ ಯಾವುದೇ ರಕ್ತಕ್ಕೂ ಹೊಂದಿಕೆಯಾಗುವುದಿಲ್ಲ ಎಂದು ಪತ್ತೆ ಮಾಡಿದ್ದು, ಇದು ಅಪರೂಪದ ಪ್ರಕರಣ ಎಂದು ಗುರುತಿಸಲಾಗಿದೆ. ಮಹಿಳೆಯ ರಕ್ತಕ್ಕೆ ಹೊಂದಿಕೆಗಾಗಿ ಆಕೆಯ ಕುಟುಂಬದ 20 ಸದಸ್ಯರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಆದರೆ, ಯಾವುದೇ ರಕ್ತಕ್ಕೂ ಹೊಂದಿಕೆಯಾಗಿಲ್ಲ. ಹಾಗಾಗಿ ಪ್ರಕರಣವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಿ ಕುಟುಂಬದ ಸಹಯೋಗದ ಪ್ರಯತ್ನದಿಂದ ರಕ್ತ ವರ್ಗಾವಣೆಯ ಅಗತ್ಯವಿಲ್ಲದೆ ಶಸ್ತ್ರಚಿಕಿತ್ಸೆಯನ್ನು ವೈದ್ಯರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಸದ್ಯ ರಕ್ತ ನೀಡದೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಅನ್ನೋ ಮಾಹಿತಿ ಇದೆ. ಅದು ಬಿಟ್ಟರೆ ನಾನು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!