ಉದಯವಾಹಿನಿ, ಬೆಂಗಳೂರು : ಭೂ ಕಬಳಿಕೆ ಆರೋಪದ ಮೇಲೆ ಕಾಂಗ್ರೆಸ್ ಶಾಸಕ HC ಬಾಲಕೃಷ್ಣ, S.T ಸೋಮಶೇಖರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. 800 ಕೋಟಿ ರೂ. ಮೌಲ್ಯದ 108 ಎಕರೆ ಸರ್ಕಾರಿ ಗೋಮಾಳ ಜಮೀನು ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಹೆಚ್​​ಸಿ ಬಾಲಕೃಷ್ಣ, ಯಶವಂತಪುರ ಶಾಸಕ ಎಸ್​​ಟಿ ಸೋಮಶೇಖರ್ ಆಪ್ತರು ಮತ್ತು ಕೆಲ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಒಟ್ಟು 22 ಜನರ ವಿರುದ್ಧ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಸರ್ವೇ ನಂಬರ್ 233, 234, 235 ಮತ್ತು 236ರ ಗೋಮಾಳ ಜಮೀನು. ಒಟ್ಟು 165 ಕೋಟಿ ರೂ ಮೌಲ್ಯದ 26 ಎಕರೆ ಗೋಮಾಳ ಜಮೀನು ಕಬಳಿಕೆ ಆರೋಪ ಕೇಳಿಬಂದಿದ್ದು, ಈ ಪೈಕಿ 54 ಕೋಟಿ ರೂ ಮೌಲ್ಯದ 8 ಎಕರೆ ಜಮೀನು ಶಾಸಕ ಹೆಚ್​​ಸಿ ಬಾಲಕೃಷ್ಣ ತಮ್ಮ ಪತ್ನಿ ರಾಧಾ ಬಾಲಕೃಷ್ಣ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ಎನ್.ಆರ್ ರಮೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಮೂರನೇ ವ್ಯಕ್ತಿಗೆ ಮಂಜೂರು ಮಾಡಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. 2025ರ ಏಪ್ರಿಲ್ 3ರಂದು ಕೆಂಗೇರಿ ಉಪ ನೋಂದಣಿ ಅಧಿಕಾರಿ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನಲ್ಲೇನಿದೆ..? ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆಂಗಳೂರು ದಕ್ಷಿಣ ತಾಲ್ಲೂಕು, ತಾವರೆಕೆರೆ ಹೋಬಳಿ, ಕುರುಬರ ಹಳ್ಳಿ ಗ್ರಾಮದ ಸರ್ವೆ ನಂ 158 ರಲ್ಲಿ ಒಟ್ಟು 130.29 ಎಕರೆ ವಿಸ್ತೀರ್ಣದ ಸ್ವತ್ತು ಸಂಪೂರ್ಣವಾಗಿ “ಸರ್ಕಾರಿ ಗೋಮಾಳ” ಪ್ರದೇಶವಾಗಿದೆ. ಪ್ರಸ್ತುತ ಕುರುಬರ ಹಳ್ಳಿ ಗ್ರಾಮದ ಪ್ರತೀ ಎಕರೆ ಜಮೀನಿಗೆ ಕನಿಷ್ಟ ಆರು ಕೋಟಿ ರೂ. ಗಳಿಗೂ ಅಧಿಕವಿದ್ದು, ಒಟ್ಟಾರೆ 130.29 ಎಕರೆ ವಿಸ್ತೀರ್ಣದ ಜಮೀನಿನ ಮಾರುಕಟ್ಟೆ ಬೆಲೆ ಸುಮಾರು 800 ಕೋಟಿ ರೂ. ಗಳಿಗೂ ಅಧಿಕವಾಗಿದೆ.

ಇಂತಹ ಅತ್ಯಮೂಲ್ಯ ಸರ್ಕಾರಿ ಸ್ವತ್ತಿನ ಮೇಲೆ ತಮ್ಮ ಕಾಕದೃಷ್ಟಿ ಬೀರಿರುವ ಪ್ರಭಾವಿ ಸರ್ಕಾರಿ ನೆಲಗಳ್ಳರು, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಈ “ಸರ್ಕಾರಿ ಗೋಮಾಳ’ದ ಸ್ವತ್ತಿನಲ್ಲಿ ಸ್ವಲ್ಪ ಸ್ವಲ್ಪವೇ ಪ್ರಮಾಣದಲ್ಲಿ ಕಬಳಿಸುವ ಕಾನೂನು ಬಾಹಿರ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿದ್ದಾರೆ. ಇಂತಹ ಪ್ರಭಾವಿ ಸರ್ಕಾರಿ ನೆಲಗಳ್ಳರ ಒತ್ತಡಗಳಿಂದಾಗಿ ಕುರುಬರ ಹಳ್ಳಿ ಗ್ರಾಮದ ಸರ್ವೆ ನಂ: 158 ಕ್ಕೆ ಹೊಸದಾಗಿ ಸರ್ವೆ ನಂ: 233, 234, 235 ಮತ್ತು 236 ಎಂದು ಪೋಡಿ ಮಾಡಿ ಬದಲಾಯಿಸಲಾಗಿದೆ.
ಪ್ರಸ್ತುತ ಬೆಂಗಳೂರು ದಕ್ಷಿಣ ತಾಲ್ಲೂಕಿನ ವ್ಯಾಪ್ತಿಗೆ ಒಳಪಟ್ಟಿರುವ “ತಾವರೆಕೆರೆ ಹೋಬಳಿ”ಯು ಈ ಮೊದಲು ಮಾಗಡಿ ತಾಲ್ಲೂಕು ಕಛೇರಿಯ ವ್ಯಾಪ್ತಿಗೆ ಒಳಪಟ್ಟಿತ್ತು. ಮಾಗಡಿ ತಾಲ್ಲೂಕು ಕಛೇರಿಯಲ್ಲಿದ್ದ ಬಹುತೇಕ ದಾಖಲೆಗಳನ್ನು ತಿದ್ದಿಸುವಂತಹ ಕಾನೂನು ಬಾಹಿರ ಕಾರ್ಯಗಳನ್ನು, ಆ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ, ನೌಕರರ ಮೂಲಕ ಪ್ರಭಾವಿ ರಾಜಕಾರಣಿಗಳು ಮಾಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!