ಉದಯವಾಹಿನಿ, ಕೊಡಗು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಗಾಳಿ ಮಳೆಯ ಆರ್ಭಟ ಜೋರಾಗಿದ್ದು ನಾನಾ ಅವಾಂತರ ಮುಂದುವರೆಯುತ್ತಿದೆ. ಈ ನಡುವೆ 2018ರಲ್ಲಿ ಭೂಕುಸಿತ ಉಂಟಾಗಿದ್ದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಳಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಇದೀಗ ಅಂತರ್ಜಲದ ಮಟ್ಟ ಹೆಚ್ಚಾಗಿ ತಡೆಗೋಡೆಗಳಲ್ಲಿ ಬಿರುಕು ಉಂಟಾಗುತ್ತಿದ್ದು ಹೆದ್ದಾರಿ ತಡೆಗೋಡೆ ಕುಸಿಯುವ ಭೀತಿ ಎದುರಾಗಿದೆ. ಆತಂಕದಲ್ಲಿದ್ದ 6 ಕುಟುಂಬಗಳನ್ನ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.
ಹೌದು. ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮಳೆಯ ಅರ್ಭಟ ಹೆಚ್ಚಾಗಿ ನಾನಾ ರೀತಿಯ ಅವಾಂತರಗಳು ಮುಂದುವರೆಯುತ್ತಿವೆ. ಈ ನಡುವೆ ಅಗಸ್ಟ್ ತಿಂಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು, ಗುಡ್ಡಗಾಡು ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಈ ನಡ್ವೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ-275ರಲ್ಲಿ ತಡೆಗೋಡೆಯಲ್ಲಿ ಬಿರುಕು ಮೂಡಿದೆ.
ಮಡಿಕೇರಿ ಸಮೀಪದ ಕರ್ಣಗೇರಿ ಪ್ರದೇಶದಲ್ಲಿ 2018ರಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿತ್ತು. ಇದರಿಂದಾಗಿ ಮಡಿಕೇರಿ-ಮಂಗಳೂರು ರಸ್ತೆ ಸಂಪರ್ಕ ಕಡಿತಗೊಂಡು ಸುತ್ತಿಬಳಸಿಕೊಂಡು ಮಡಿಕೇರಿ, ಮೈಸೂರಿನತ್ತ ವಾಹನ ಸವಾರರು ಸಂಚಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಭೂಕುಸಿತ ಉಂಟಾಗಿದ್ದ ಪ್ರದೇಶದಲ್ಲಿ ತಡೆಗೋಡೆಯನ್ನ ನಿರ್ಮಾಣ ಮಾಡಿತ್ತು. ಆದರೀಗ ಮಳೆಯ ಅರ್ಭಟ ಹೆಚ್ಚಾಗುತ್ತಿರುವುದರಿಂದ ತಡೆಗೋಡೆ ಬದಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಭಾರೀ ಪ್ರಮಾಣದ ಬಿರುಕು ಮೂಡುತ್ತಿದೆ.

Leave a Reply

Your email address will not be published. Required fields are marked *

error: Content is protected !!