ಉದಯವಾಹಿನಿ, ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ನೀಡುವ ಮಾಹಿತಿ ನಿಖರವಾಗಿರಬೇಕು. ಈ ಮೂಲಕ ಇ.ಡಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂದು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಎಚ್ಚರಿಸಿದೆ. ಈ ಕುರಿತು ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಮಾತನಾಡಿ, ಇ.ಡಿ ವಾಸ್ತವ ಅಂಶಗಳನ್ನು ನೀಡುವಾಗ ದಾರಿತಪ್ಪಿಸುವ ರೀತಿಯಲ್ಲಿ ಅಥವಾ ಮಾನಹಾನಿ ಮಾಡುವ ರೀತಿಯಲ್ಲಿರಬಾರದು. ಒಂದು ವೇಳೆ ಹಾಗೆ ಮಾಡಿದರೆ ಅದು ಸಂಸ್ಥೆಯ ಘನತೆಗೆ ಧಕ್ಕೆ ಬರುತ್ತದೆ. ಜೊತೆಗೆ ಸಂಬಂಧಪಟ್ಟ ವ್ಯಕ್ತಿಯ ಘನತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.
ಇ.ಡಿಯಂತಹ ತನಿಖಾ ಸಂಸ್ಥೆಯು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದು ಹಾಗೂ ನ್ಯಾಯಯುತ, ಸಮಂಜಸ ಪ್ರಕ್ರಿಯೆಗಳನ್ನು ನಡೆಸುವ ಜವಾಬ್ದಾರಿ ಹೊಂದಿರುತ್ತದೆ. ಅದಲ್ಲದೇ ಇ.ಡಿಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುವ ಮಾಹಿತಿಯೂ ನಿಖರವಾಗಿರಬೇಕು. ದಾರಿತಪ್ಪಿಸದ ಹಾಗೂ ರೋಚಕತೆಯಿಂದ ಮುಕ್ತವಾಗಿರಬೇಕು. ರಾಜಕೀಯವಾಗಿ ಪಕ್ಷಪಾತ ಮಾಡುವ ಉದ್ದೇಶದಿಂದ ಯಾವುದೇ ವಿಷಯವನ್ನು ಹಂಚಿಕೊಳ್ಳುವುದರಿಂದ ಸಂಸ್ಥೆಯ ಸಮಗ್ರತೆ ಹಾಳಾಗುತ್ತದೆ ಎಂದಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿಯ ಮಾಜಿ ಸಚಿವ ಸತ್ಯೇಂದರ್ ಜೈನ್ ಅವರು ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯ ತಿರಸ್ಕರಿಸಿ, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಬಾನ್ಸುರಿ ಸ್ವರಾಜ್ ಅವರು ಜೈನ್ ಅವರ ಮನೆಯಿಂದ ಇ.ಡಿಯು 1.8 ಕೆಜಿ ಚಿನ್ನ, 133 ಚಿನ್ನದ ನಾಣ್ಯಗಳು ಮತ್ತು 3 ಕೋಟಿ ರೂ. ನಗದು ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆ ಬಾನ್ಸುರಿ ಅವರ ವಿರುದ್ಧ ಜೈನ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

Leave a Reply

Your email address will not be published. Required fields are marked *

error: Content is protected !!