ಉದಯವಾಹಿನಿ, ರುದ್ರಪುರ: ಉತ್ತರಾಖಂಡದ ರುದ್ರಪುರದ ಸಿಡ್ಕುಲ್ ಪ್ರದೇಶದಲ್ಲಿ ಚಲಿಸುತ್ತಿದ್ದ ಕಾರಿನಲ್ಲೇ ಯುವತಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಕೇವಲ 24 ಗಂಟೆಗಳಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಬ್ಬರನ್ನು ಬಂಧಿಸಿರುವ ಟ್ರಾನ್ಸಿಟ್ ಕ್ಯಾಂಪ್ ಪೊಲೀಸರು, ಘಟನೆಗೆ ಬಳಸಲಾದ ಕಾರನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧನದ ಬಳಿಕ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರ ಅನುಮತಿ ಪಡೆದು ಜೈಲಿಗೆ ಕಳುಹಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಯುವತಿ ಕೆಲಸಕ್ಕೆಂದು ಕಾರ್ಖಾನೆಗೆ ತೆರಳುತ್ತಿದ್ದಳು ಎಂದು ವರದಿಯಾಗಿದೆ. ಈ ವೇಳೆ, ಆರೋಪಿಗಳು ಆಕೆಯನ್ನು ತಮ್ಮ ಕಾರಿಗೆ ಕರೆದೊಯ್ದು, ಕಾರ್ಖಾನೆ ಬಳಿ ಬಿಡುವುದಾಗಿ ಭರವಸೆ ನೀಡಿ, ಬಳಿಕ ಪ್ರಯಾಣಿಸುತ್ತಿದ್ದ ಕಾರಿನಲ್ಲೇ ಅತ್ಯಾಚಾರ ಮಾಡಿ ಬಳಿಕ ಪರಾರಿಯಾಗಿದ್ದರು.
ಕೆಲಸಕ್ಕೆ ತೆರಳುತ್ತಿದ್ದ ಯುವತಿ: ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ಘಟನೆ ಸಂಬಂಧ ರುದ್ರಪುರದ ಯುವತಿ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾರೆ. ಜನವರಿ 25 ರ ಬೆಳಗ್ಗೆ ತಾನು ಕಾರ್ಖಾನೆಯಲ್ಲಿ ಕೆಲಸಕ್ಕೆ ಎಂದು ಮನೆಯಿಂದ ಹೊರಟಿದ್ದಾಗಿ ತಿಳಿಸಿದ್ದಾಳೆ. ಮೊದಲು ದೇವಸ್ಥಾನದ ಬಳಿ ಆಟೋಗಾಗಿ ಕಾಯುತ್ತಿದ್ದಳು. ಆದರೆ, ಬಹಳ ಸಮಯದವರೆಗೆ ಆಟೋ ಸಿಗದ ಕಾರಣ, ದೇವಸ್ಥಾನದಿಂದ ಏಟ್ರಿಯಾ ರಸ್ತೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದೆ ಎಂದು ಯುವತಿ ದೂರಿನಲ್ಲಿ ಮಾಹಿತಿ ನೀಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಚಲಿಸುವ ಕಾರಿನಲ್ಲಿ ನಡೆಯಿತು ಅತ್ಯಾಚಾರ; ಆಟೋ ಸಿಗದೇ ನಡೆದುಕೊಂಡು ಮುಂದೆ ಸಾಗುತ್ತಿದ್ದಾಗ ಕಾರೊಂದು ತನ್ನ ಬಳಿ ಬಂದು ನಿಂತಿತು. ಕಾರಿನಲ್ಲಿದ್ದ ಇಬ್ಬರು ಯುವಕರು ಕಾರ್ಖಾನೆ ಬಳಿಕ ನಮ್ಮ ಕಾರು ಹೋಗುತ್ತಿದೆ. ಅಲ್ಲಿ ನಿಮಗೆ ಡ್ರಾಫ್ ಮಾಡುವುದಾಗಿ ಹೇಳಿ ಕಾರು ಹತ್ತಿಸಿಕೊಂಡರು. ಬಳಿಕ ಇವರು ನನ್ನನ್ನು ಸ್ಥಳವೊಂದಕ್ಕೆ ಕರೆದುಕೊಂಡು ಹೋದರು. ಈ ವೇಳೆ ತಾನು ವಿರೋಧಿಸಿದಾಗ ಇದರಲ್ಲಿ ಒಬ್ಬ ಕಾರಿನ ಹಿಂದಿನ ಸೀಟಿಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿದ ಎಂದು ದಾಖಲಾಗಿರುವ ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
