ಉದಯವಾಹಿನಿ, ನವದೆಹಲಿ: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ 18 ಗಂಟೆ ಕಾಲಾವಕಾಶ ನೀಡಿದೆ. ಫೆಬ್ರವರಿ 2, 3 ಮತ್ತು 4ರಂದು ಚರ್ಚೆ ನಡೆಯಲಿದೆ. ಫೆ.4ರಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.ಈ ಕುರಿತು ಇಂದು ನಡೆದ ಲೋಕಸಭೆ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.2026-27ರ ಕೇಂದ್ರ ಬಜೆಟ್​ ಫೆ.1ರಂದು ಮಂಡನೆಯಾಗಲಿದೆ. ಇದರ ಮೇಲೆ ಸಾಮಾನ್ಯ ಚರ್ಚೆ ಫೆ.5, 9, 10 ಮತ್ತು 11ರಂದು ನಡೆಯಲಿದ್ದು, ಒಟ್ಟು 18 ಗಂಟೆ ಸಮಯ ನಿಗದಿಪಡಿಸಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು​ ಫೆ.11ರಂದು ಉತ್ತರಿಸುವ ನಿರೀಕ್ಷೆ ಇದೆ.
ನಡೆದ ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ವಿಪಕ್ಷಗಳು ಮನರೇಗಾ ಪುನರ್​ಸ್ಥಾಪನೆ, ಚುನಾವಣಾ ಪಟ್ಟಿಗಳ ಎಸ್​ಐಆರ್​ ಮತ್ತು ಯುಜಿಸಿ ವಿವಾದ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆಗೆ ಒತ್ತಾಯಿಸಿದವು.ಇಂದಿನ ಲೋಕಸಭಾ ಕಲಾಪದಲ್ಲಿ ವಿತ್ತ ಸಚಿವರು ಆರ್ಥಿಕ ಸಮೀಕ್ಷೆ ಮಂಡಿಸಿದ್ದು, ಇದಾದ ಬಳಿಕ ಸದನವನ್ನು ಫೆ.1ಕ್ಕೆ ಮುಂದೂಡಲಾಯಿತು. ಈ ವರ್ಷ ಬಜೆಟ್​ ಅಧಿವೇಶನ ವಾರಾಂತ್ಯದಲ್ಲಿ ಬಂದಿದೆ. ಈ ವರ್ಷ ಸತತ 9ನೇ ಬಾರಿಗೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡಿಸಲಿದ್ದಾರೆ. ಇದು ಭಾರತದ ಸಂಸತ್​ ಮತ್ತು ಆರ್ಥಿಕತೆಯ ಇತಿಹಾಸದಲ್ಲೇ ಪ್ರಮುಖ ಹೆಗ್ಗೆರುತಾಗಲಿದೆ.
ಆರ್ಥಿಕ ಸಮೀಕ್ಷೆಯನ್ನು ದೇಶದ ಆರ್ಥಿಕತೆಯ ಕುರಿತಾದ ಅಧಿಕೃತ ವಾರ್ಷಿಕ ವರದಿ ಎಂದು ಪರಿಗಣಿಸಲಾಗುತ್ತದೆ. ಇದು ಹಿಂದಿನ ವರ್ಷದ ಆರ್ಥಿಕತೆಯ ಕಾರ್ಯಕ್ಷಮತೆಯ ಸಮಗ್ರ ದತ್ತಾಂಶ-ಬೆಂಬಲಿತ ವಿಮರ್ಶೆಯನ್ನು ಒದಗಿಸುತ್ತದೆ. ಹಾಗೆಯೇ ಭವಿಷ್ಯದ ನೀತಿ-ನಿರ್ದೇಶನಕ್ಕಾಗಿ ವಿಶಾಲವಾದ ಮಾರ್ಗಸೂಚಿ ನೀಡುತ್ತದೆ. ಸರ್ಕಾರದ ಪ್ರಮುಖ ವಾರ್ಷಿಕ ವರದಿಯಾಗಿ, ಇದು ಕಳೆದ 12 ತಿಂಗಳುಗಳಲ್ಲಿನ ಪ್ರಮುಖ ಆರ್ಥಿಕ ಬೆಳವಣಿಗೆಗಳನ್ನು ಪರಿಶೀಲಿಸುತ್ತದೆ.ಈ ಬಾರಿ ಬಜೆಟ್ ಅಧಿವೇಶನ 65 ದಿನ ನಡೆಯಲಿದ್ದು, ಏಪ್ರಿಲ್ 2ರಂದು ಕೊನೆಗೊಳ್ಳುತ್ತದೆ. ಫೆ.13ರಂದು ಉಭಯ ಸದನಗಳು ವಿರಾಮಕ್ಕಾಗಿ ಮುಂದೂಡಿ, ಮಾರ್ಚ್ 9ರಂದು ಮತ್ತೆ ಸಭೆ ಸೇರುತ್ತವೆ.

Leave a Reply

Your email address will not be published. Required fields are marked *

error: Content is protected !!