ಉದಯವಾಹಿನಿ, ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತಿತರ ಕಡೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಪ್ರಚೋದನಕಾರಿ ವಿಷಯಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಧರ್ಮಸ್ಥಳ ಪ್ರಕರಣದ ಬಗ್ಗೆ ಇಲ್ಲಸಲ್ಲದ ಪೋಸ್ಟ್‌ಗಳನ್ನು ಹಾಕಿದವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದರು.ಹೂತ ಶವಗಳ ಕುರಿತ ತನಿಖೆಗೆ ರಚಿಸಲಾಗಿರುವ ಎಸ್‌ಐಟಿ ತನಿಖಾ ತಂಡ ಮುಖ್ಯಸ್ಥರಾಗಿರುವ ಪ್ರಣಬ್ ಮೊಹಂತಿ ಇಂದು ಗೃಹ ಸಚಿವರನ್ನು ಭೇಟಿಯಾಗಿದ್ದು, ಈ ಭೇಟಿಯ ಬಳಿಕ ಸಚಿವರು ಮಾಧ್ಯಮಗಳ ಜೊತೆ ಮಾತನಾಡಿದರು. ಮೊಹಂತಿ ಅವರು ಕೇಂದ್ರ ಸೇವೆಗೆ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಮೊಹಂತಿ ಎಸ್‌ಐಟಿಯಿಂದ ಹೊರಬೀಳಲಿದ್ದಾರೆ ಎನ್ನಲಾಗಿತ್ತು. ಈ ಕುರಿತು ಪರಮೇಶ್ವರ್ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಪ್ರಣಬ್ ಮೊಹಂತಿ ಅವರು ಕೇಂದ್ರದ ಹುದ್ದೆಗಳಿಗೆ ನೇಮಕ ಆಗಿದ್ದಾರೆ. ಇದು ನಿಜಕ್ಕೂ ನಮ್ಮ ಕರ್ನಾಟಕಕ್ಕೆ ದೊಡ್ಡ ಕ್ರೆಡಿಟ್ ಆಗಿದೆ. ತಕ್ಷಣವೇ ಯಾವ ಹುದ್ದೆ ಕೊಡ್ತಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತಿಳಿಸಲೆಂದೇ ಮೊಹಂತಿ ಬಂದಿದ್ದರು. ಅದು ಬಿಟ್ಟು ಬೇರೆ ಯಾವುದೇ ಚರ್ಚೆ ನಡೆದಿಲ್ಲ. ಮೊಹಂತಿ ಹೊರಗಡೆ ಹೋಗುವ ಪ್ರಶ್ನೆ ಎಲ್ಲಿ ಬಂದಿದೆ? ಅವರು ಕರೆದಾಗ ನಾವು ಕಳುಹಿಸುತ್ತೇವೆ ಎಂಬುದೇನೂ ಇಲ್ಲ. ಇಂತಹ ಜಾಗಕ್ಕೆ ನೇಮಕ ಮಾಡುತ್ತಿದ್ದೇವೆ ಎಂದು ಕೇಂದ್ರ ಹೇಳಬೇಕು. ಮೊಹಂತಿ ಸೆಲೆಕ್ಟ್ ಆಗಿದ್ದಾರೆ ಅಷ್ಟೇ. ನಾವು ಅವರನ್ನು ಕಳುಹಿಸುತ್ತೇವೋ ಬಿಡುತ್ತೇವೋ ಅದು ನಮಗೆ ಬಿಟ್ಟ ವಿಚಾರ ಎಂದು ಗೃಹ ಸಚಿವರು ತಿಳಿಸಿದರು.
ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಪ್ರಕರಣದ ತನಿಖೆ ಮಾಡುತ್ತಿದ್ದಾರೆ. ವರದಿ ಕೊಡುವವರೆಗೂ ಆ ಬಗ್ಗೆ ಮಾತನಾಡಲು ಹೋಗಲ್ಲ. ತನಿಖೆ ನಡೆಯುವಾಗ ನಾವು ಮಾತಾಡೋದು ಸಮಂಜಸ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಮಾಜದ ಭಾವನೆಗಳಿಗೆ ಧಕ್ಕೆ ಆಗುವ ಪೋಸ್ಟ್‌ಗಳ ಬಗ್ಗೆ ನಿಗಾವಹಿಸಲಾಗಿದೆ. ಭಾವನೆಗಳಿಗೆ ಧಕ್ಕೆ ಆಗುವ ಪೋಸ್ಟ್ ಮಾಡಿದವರ ಬಗ್ಗೆ ಕ್ರಮ ತೆಗೆದುಕೊಳ್ತಾರೆ ಎಂದಿದ್ದಾರೆ.
