ಉದಯವಾಹಿನಿ, ಬೆಂಗಳೂರು: ಕರ್ನಾಟಕವು ಆಲಮಟ್ಟಿ ಅಣೆಕಟ್ಟು ಎತ್ತರವನ್ನು ಈಗಿರುವ 519.60 ಮೀಟರ್‌ನಿಂದ 524.256 ಮೀ.ಗೆ ಎತ್ತರಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದೆ ಎನ್ನುವ ಮಹಾರಾಷ್ಟ್ರದ ತಕರಾರಿಗೆ ಅರ್ಥವಿಲ್ಲ. ಅದರ ಇಂಥ ವಾದ ಈಗಾಗಲೇ ನ್ಯಾಯಾಧಿಕರಣ, ಸುಪ್ರೀಂಕೋರ್ಟ್‌ ಮತ್ತು ಲೋಕಸಭೆಗಳಲ್ಲಿ ತಿರಸ್ಕೃತವಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ʻಆಲಮಟ್ಟಿ ಅಣೆಕಟ್ಟೆಯನ್ನು ನಾವು ಕಟ್ಟುವುದಕ್ಕೂ ಮೊದಲೇ ಸಾಂಗ್ಲಿಯಲ್ಲಿ 1964, 1976, 1994 ಮತ್ತು 1997ರಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ಸುಪ್ರೀಂಕೋರ್ಟ್‌ ಕೂಡ ಅಣೆಕಟ್ಟಿನ ಎತ್ತರವನ್ನು 524.256 ಮೀ.ಗೆ ನಾವು ಏರಿಸಬಹುದು ಎಂದು 2000ನೇ ಇಸವಿಯಲ್ಲೇ ಹೇಳಿದೆ. ಇದಾದ ಮೇಲೂ ಮಹಾರಾಷ್ಟ್ರವು ನಮಗೆ ವಿರುದ್ಧವಾಗಿ 2005ರಲ್ಲಿ ನ್ಯಾಯಾಧಿಕರಣಕ್ಕೆ ಹೋಯಿತು. ಆದರೆ ಅದರ ಮಧ್ಯಾಂತರ ಮನವಿಯು ಅಲ್ಲೂ ತಿರಸ್ಕೃತಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಆಲಮಟ್ಟಿ ಅಣೆಕಟ್ಟು ಕಾರಣದಿಂದಾಗಿಯೇ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದೆ ಎಂಬ ವಾದವನ್ನು ನ್ಯಾಯಮಂಡಳಿಯು ಪುರಸ್ಕರಿಸಿಲ್ಲ. ಈ ಸಂಬಂಧವಾಗಿ ನ್ಯಾಯಾಧಿಕರಣವು 2010 ಮತ್ತು 2013ರಲ್ಲಿ ಕೂಡ ವಿಸ್ತೃತ ವರದಿ ನೀಡಿದೆ. ಈ ವಿಚಾರದಲ್ಲಿ ಅದು ಹಿಪ್ಪರಗಿ ಜಲಾಶಯವನ್ನೂ ಪರಿಗಣಿಸಿದೆ. ಜತೆಗೆ, ಕೃಷ್ಣಾ ನೀರು ಹಂಚಿಕೆ ಸಂಬಂಧ ರಚಿಸಲಾದ ಎರಡನೆಯ ನ್ಯಾಯಾಧಿಕರಣವು ನೀಡಿರುವ ತೀರ್ಪನ್ನು ಇದುವರೆಗೂ ಯಾವ ರಾಜ್ಯಗಳೂ ಪ್ರಶ್ನಿಸಿಲ್ಲ. ಹೀಗಿರುವಾಗ, ಈಗ ಇದ್ದಕ್ಕಿದ್ದಂತೆ ತಕರಾರು ತೆಗೆಯುವುದರ ಹಿಂದಿನ ಉದ್ದೇಶ ಯಾರಿಗಾದರೂ ಅರ್ಥವಾಗುತ್ತದೆ ಎಂದು ಟೀಕಿಸಿದರು.

Leave a Reply

Your email address will not be published. Required fields are marked *

error: Content is protected !!