ಉದಯವಾಹಿನಿ, ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕ ಪಾಸುಗಳನ್ನು ವಿತರಣೆ ಮಾಡುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇದೀಗ ವಜ್ರ ಸೇವೆಗಳ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸದಾಗಿ ವಜ್ರ ಸಾಪ್ತಾಹಿಕ ಪಾಸನ್ನು ಆಗಸ್ಟ್ 1 ರಿಂದ ವಿತರಣೆ ಮಾಡುತ್ತಿದೆ.
ದರ ಎಷ್ಟು..?
ವಜ್ರ ಸಾಪ್ತಾಹಿಕ ಪಾಸು 750 ರೂ. – ಪಾಸುದಾರರಿಗೆ ಪಾಸಿನ ಮಾನ್ಯತಾ ಅವಧಿಯಲ್ಲಿ ಸಂಸ್ಥೆಯ ವಜ್ರ, ಸಾಮಾನ್ಯ ವೇಗದೂತ ಹಾಗೂ ಸಾಮಾನ್ಯ ಸಾರಿಗೆ ಸೇವೆಗಳಲ್ಲಿ (ವಾಯುವಜ್ರ ಮತ್ತು ವಿಶೇಷ ಸೇವೆಗಳನ್ನು ಹೊರತುಪಡಿಸಿ) ಅನಿಯಮಿತವಾಗಿ ಪ್ರಯಾಣಿಸಲು ಅವಕಾಶ. ಟೋಲ್ ಮಾರ್ಗಗಳಲ್ಲಿ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯ.ವಜ್ರ ಸಾಪ್ತಾಹಿಕ ಪಾಸು ಹೊಂದಿರುವ ಪ್ರಯಾಣಿಕರು ವಜ್ರ ವೇಗದೂತ ಸೇವೆಗಳಲ್ಲಿ ಪ್ರಯಾಣಿಸುವಾಗ, ಪ್ರತ್ಯೇಕವಾಗಿ 10 ರೂ. ವೇಗದೂತ ಸೇವಾ ಶುಲ್ಕ ಹಾಗೂ ಅನ್ವಯವಾಗುವ ಟೋಲ್ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿರುತ್ತದೆ.ಸಾರ್ವಜನಿಕರು ಈ ಪಾಸುಗಳನ್ನು ಸುಲಭವಾಗಿ ಪಡೆಯಲು, ಸಂಸ್ಥೆಯು ಟುಮ್ಯಾಕ್ ಮೊಬೈಲ್ ಆಪ್ ಮೂಲಕ ಡಿಜಿಟಲ್ ಮಾದರಿಯಲ್ಲಿ ವಿತರಣಾ ವ್ಯವಸ್ಥೆ ರೂಪಿಸಿದೆ. ಪ್ರಯಾಣಿಕರು ಆಪ್ ಮೂಲಕ ನೇರವಾಗಿ ಪಾಸು ಖರೀದಿ ಮಾಡಬಹುದು.
