ಉದಯವಾಹಿನಿ, ಮಂಡ್ಯ: ಕೆಆರ್‌ಎಸ್ ಡ್ಯಾಂಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಹುನ್ನಾರ ನಡೆಸುತ್ತಿದೆ ಎಂದು ವಿರೋಧ ಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಮೈಸೂರು ರಾಜ ಮನೆತನಕ್ಕೆ ಕಳಂಕ ತರುವಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಈಗ ಕೆಆರ್‌ಎಸ್ ಇತಿಹಾಸಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪದೇ ಪದೇ ಟಿಪ್ಪು ಸುಲ್ತಾನರ ಹೆಸರು ತಂದು ಕಳಂಕಿತ ಹೇಳಿಕೆಗಳನ್ನು ನೀಡುತ್ತಿದ್ದು, ಇದೇ ಹಾದಿಯಲ್ಲಿ ನಡೆದಿರುವ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಯಾವುದೋ ಇದುವರೆಗೂ ಕಾಣದ ಶಿಲಾನ್ಯಾಸವನ್ನು ಇಟ್ಟುಕೊಂಡು ಕೆಆರ್‌ಎಸ್‌ನ ಹೆಸರು ಬದಲಿಸಲು ಪೀಠಿಕೆ ಹಾಕಿದ್ದಾರೆ. ಕೆಆರ್‌ಎಸ್ ಹೆಸರು ಬದಲಿಸಲು ಯಾರದೋ ಕೈವಾಡವಿದ್ದು, ಹುನ್ನಾರವೆಸಗುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಟಿಪ್ಪು ಸುಲ್ತಾನ್ ಕಾಂಗ್ರೆಸ್ ಪಕ್ಷ ಎಂದು ಹೆಸರಿಡಲಿ: ಟಿಪ್ಪು ಎಂದರೆ ಸಿಎಂ ಸಿದ್ದರಾಮಯ್ಯಗೆ ಹೆಚ್ಚು ಪ್ರೀತಿ, ಟಿಪ್ಪುವಿನ ಮೇಲೆ ಅಷ್ಟು ಪ್ರೀತಿಯಿದ್ದರೆ, ತಮ್ಮ ಪಕ್ಷಕ್ಕೆ ಟಿಪ್ಪು ಸುಲ್ತಾನ್ ಕಾಂಗ್ರೆಸ್ ಪಕ್ಷ ಎಂದು ಹೆಸರಿಡಲಿ. ಟಿಪ್ಪು ಓರ್ವ ನಾಡದ್ರೋಹಿ, ಲಕ್ಷಾಂತರ ಹಿಂದುಗಳ ಹತ್ಯೆಗೈದ ಟಿಪ್ಪು, ಪರ್ಷಿಯಾ ದೇಶದವನಾಗಿದ್ದು, ಟಿಪ್ಪು ಸತ್ತ 112 ವರ್ಷಗಳ ನಂತರ 1911ರಲ್ಲಿ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಶಿಲಾನ್ಯಾಸ ಹೇಗೆ ಬಂತೆAದು ಪ್ರಶ್ನಿಸಿದ್ದಾರೆ.
