ಉದಯವಾಹಿನಿ,ಲಖನೌ: ಮಂಟಪದವರೆಗೂ ಹೋದ ‘ಮದುವೆ’ಗಳು ಕೊನೆ ಕ್ಷಣದಲ್ಲಿ ಸಿನಿಮೀಯ ರೀತಿಯಲ್ಲಿ ರದ್ದಾದ ಘಟನೆಗಳು ಸಾಕಷ್ಟಿವೆ. ವರ ಕುಡಿದು ಬಂದನೆಂದೋ, ಇಲ್ಲವೇ ವಧುವಿನ ಕಡೆಯವರು ವರದಕ್ಷಿಣೆ ಕೇಳಿದರೆಂದೋ, ಸೀರೆ ಚೆನ್ನಾಗಿಲ್ಲವೆಂದೋ ಯಾವ್ಯಾವುದೋ ಕಾರಣಕ್ಕೆ ಮದುವೆಗಳು ಮುರಿದುಬಿದ್ದಿವೆ. ಆದರೆ ಇಲ್ಲೊಬ್ಬಳು ನವವಧು ಮದುವೆಯಾದ ಕೆಲವೇ ಹೊತ್ತಿನಲ್ಲಿ ಪತಿಯನ್ನು ದೂರ ಮಾಡಿ, ಆತನ ಕಿರಿಯ ಸಹೋದರನನ್ನು ವರಿಸಿದ ಘಟನೆ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ಸೈದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾರ್ಸಿಪುರ ಗ್ರಾಮದಲ್ಲಿ ನಡೆದಿದೆ. ದೇಶದ ಪ್ರಧಾನಿ ಯಾರೆಂದು ಪತಿಗೆ ತಿಳಿದಿಲ್ಲವೆಂಬ ಕಾರಣಕ್ಕೆ ಆಕೆ ಈ ಮದುವೆ ಮುರಿದುಕೊಂಡಿದ್ದಾಳಂತೆ.
ಗ್ರಾಮದ ರಾಮ್ ಅವತಾರ್ ಎಂಬುವರ ಪುತ್ರ ಶಿವಶಂಕರ್ (27) ಮತ್ತು ಕರಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತ್ ಪಟ್ಟಿ ಗ್ರಾಮದ ನಿವಾಸಿ ಲಖೇದು ರಾಮ್ ಎಂಬುವರ ಪುತ್ರಿ ರಂಜನಾ ಮಧ್ಯೆ 6 ತಿಂಗಳ ಹಿಂದೆಯೇ ನಿಶ್ಚಿತಾರ್ಥವಾಗಿತ್ತು. ಸಂಪ್ರದಾಯದಂತೆ ವರನ ಹಣೆಗೆ ತಿಲಕ ಇರಿಸುವ ಮೂಲಕ ವಿವಾಹ ನಿಶ್ಚಯ ಮಾಡಿಕೊಳ್ಳಲಾಗಿತ್ತು. ಸುಲಭದ ಪ್ರಶ್ನೆಗೆ ‘ನರೇಂದ್ರ ಮೋದಿ’ ಎಂಬ ಉತ್ತರ ನೀಡಲಾಗದೆ ಮದುಮಗ ತಡಬಡಾಯಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ರಂಜನಾ ಇಂಥಹ ಪತಿ ತನಗೆ ಬೇಡವೆಂದು ಮದುವೆ ಮುರಿದುಕೊಳ್ಳುವ ಘೋಷಣೆ ಮಾಡಿದ್ದಾಳೆ.
