ಉದಯವಾಹಿನಿ, ಬೆಂಗಳೂರು: ಬಿಜೆಪಿಗರು ಮೊದಲು ತಾವು ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ಆಶ್ವಾಸನೆಗಳ ಈಡೇರಿಸಿದ್ದಾರೆಯೇ ಎಂದು ಮೊದಲು ಸ್ಪಷ್ಟಪಡಿಸಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ‘ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿದ್ದು, ಈ ಸರ್ಕಾರದಿಂದ ನಮಗೆ ಸಹಾಯವಾಗುತ್ತಿದೆ ಎಂದು ಬಡವರು ಸಂತೋಷದಿಂದ ಇದ್ದಾರೆ. ನಮ್ಮ ಅಕ್ಕ ತಂಗಿಯರು ನಮ್ಮ ಶಕ್ತಿ ಯೋಜನೆಯಿಂದ ದೇವಸ್ಥಾನಗಳಿಗೆ ಭೇಟಿ ನೀಡಿ ಧರ್ಮಯಾತ್ರೆ ಮಾಡುತ್ತಿದ್ದಾರೆ. ಅವರ ಖುಷಿ ನೋಡಲಾಗದೇ, ಒಂದು ಕಾಳು ಅಕ್ಕಿ ಕಡಿಮೆ ಕೊಟ್ಟರೂ ಹೋರಾಟ ಮಾಡುತ್ತೇನೆ ಎಂದು ಅವರು ಸಂಕಟಪಡುತ್ತಿದ್ದಾರೆ.
ಯಡಿಯೂರಪ್ಪನವರು ಧರಣಿ ಮಾಡುವುದರಲ್ಲಿ ಸಮರ್ಥರು. ಈಗಲೂ ಅವರು ವಿಧಾನಸಭೆಗೆ ಬಂದು ಹೋರಾಟ ಮಾಡಲಿ. ಅನ್ನಭಾಗ್ಯ ಯೋಜನೆ ಜಾರಿ ವಿಚಾರಪವಾಗಿ ಮುನಿಯಪ್ಪ ಅವರು ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರ ಜತೆ ಮಾತನಾಡಲಿದ್ದಾರೆ. ಮುಖ್ಯಮಂತ್ರಿಗಳು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಈ ವಿಚಾರವಾಗಿ ಮಾತನಾಡಿದ್ದು, ಈ ಸಂದರ್ಭದಲ್ಲಿ ಅವರು ಕೇಂದ್ರ ಸಚಿವರ ಜತೆ ಮಾತನಾಡುವ ಭರವಸೆ ನೀಡಿದ್ದಾರೆ.
