ಉದಯವಾಹಿನಿ, ಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ ಜುಟ್ಟಿಗೆ ಮಲ್ಲಿಗೆ ಹೂವುʼ ಅನ್ನೋ ಹಾಗೇ, ದೇಶದ ಆರ್ಥಿಕತೆ ಹಳಿತಪ್ಪಿದ್ದರೂ, ಪಾಕಿಸ್ತಾನದ (Pakistan) ಕುತಂತ್ರಿ ಬುದ್ಧಿಗೇನೂ ಕಡಿಮೆಯಿಲ್ಲ. ಆರ್ಥಿಕವಾಗಿ ದಿನದಿಂದ ದಿನಕ್ಕೆ ಜರ್ಝರಿತರಾಗುತ್ತಿರುವ ಪಾಕಿಸ್ತಾನ, ಎಲ್ಲೆಲ್ಲಿ ಸಾಲ ಸಿಗುತ್ತೋ, ಅದು ದೇಶವಾಗಿರಲಿ, ಆರ್ಥಿಕ ಸಂಸ್ಥೆಗಳಾಗಿರಲಿ ಅದರ ಕದ ತಟ್ಟುತ್ತಿರುವುದು ಗೊತ್ತಿರುವ ವಿಚಾರ. ಅಲ್ಲಿನ ಆರ್ಥಿಕ ಸಮಸ್ಯೆ, ಆಂತರಿಕ ಕಿತ್ತಾಟ ಅರಿತುಕೊಂಡ, ವಿಶ್ವದ ದಿಗ್ಗಜ ಮೈಕ್ರೊಸಾಫ್ಟ್‌ ಐಟಿ ಸಂಸ್ಥೆಯು ಇತ್ತೀಚೆಗಷ್ಟೇ 25 ವರ್ಷಗಳ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿತು.

ಒಂದೆಡೆ ಪಾಕಿಸ್ತಾನ ಸರ್ಕಾರ ಐಎಂಎಫ್‌ನಿಂದ (IMF) ಸಾಲ ಪಡೆದು ಭಯೋತ್ಪಾದಕರಿಗೆ ಖರ್ಚು ಮಾಡುತ್ತಿದ್ದರೆ, ಮತ್ತೊಂದೆಡೆ ಅಲ್ಲಿನ ಸಾಮಾನ್ಯ ಜನರು ವಿದೇಶಗಳಿಗೆ ಹೋಗಿ ಭಿಕ್ಷೆ ಬೇಡುತ್ತಿದ್ದಾರೆ. ಪಾಕ್ ಮೂಲದ ಭಿಕ್ಷುಕರ ಪರಿಸ್ಥಿತಿ ಹೇಗಿದೆ ಅಂದ್ರೆ ಇತರ ದೇಶಗಳು ಪಾಕಿಸ್ತಾನಿ ಭಿಕ್ಷುಕರನ್ನ ತಮ್ಮ ದೇಶಗಳಿಂದ ಓಡಿಸಬೇಕಾಗಿದ ಪರಿಸ್ಥಿತಿಗೆ ಬಂದಿವೆ. ಇತ್ತೀಚಿನ ವರದಿಗಳ ಪ್ರಕಾರ ಸೌದಿ ಅರೇಬಿಯಾ 16 ತಿಂಗಳಲ್ಲಿ 5 ಸಾವಿರಕ್ಕೂ ಅಧಿಕ ಪಾಕ್‌ ಭಿಕ್ಷುಕರನ್ನು (Beggars) ಓಡಿಸಿದ್ರೆ, ಇರಾನ್‌ 3 ವರ್ಷಗಳಲ್ಲಿ 50,000ಕ್ಕೂ ಅಧಿಕ ಭಿಕ್ಷುಕರನ್ನು ಒದ್ದೋಡಿಸಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಪಾಕ್‌ನ ಆರ್ಥಿಕತೆಗೆ ಸಂಬಂಧಿಸಿದ ವರದಿಯೊಂದು ಅಚ್ಚರಿ ಉಂಟು ಮಾಡಿದೆ.

ಭಿಕ್ಷುಕರೇ ಶ್ರೀಮಂತರು!: ಭಿಕ್ಷಾಟನೆ ಅನ್ನೋದು ಪಾಕಿಸ್ತಾನದಲ್ಲಿ ಪ್ರಮುಖ ವೃತ್ತಿಗಳಲ್ಲಿ ಒಂದಾಗಿದೆ. ಪಾಕ್‌ನ ಒಟ್ಟು ಜನಸಂಖ್ಯೆ 25 ಕೋಟಿಯಷ್ಟಿದ್ದರೆ, ಇದರಲ್ಲಿ 4 ಕೋಟಿಯಷ್ಟು ಜನ ಭಿಕ್ಷಾಟನೆ ಮಾಡುತ್ತಿದ್ದಾರೆ. ತಮ್ಮ ದೇಶಗಳಲ್ಲಿ ಭಿಕ್ಷಾಟನೆ ಮಾಡಿಕೊಂಡಿದ್ದ ಬೆಗ್ಗರ್‌ ಜಾಲ ದಿನೇ ದಿನೇ ಆರ್ಥಿಕತೆ ಕ್ಷೀಣಿಸಿದಂತೆ ವಿದೇಶಗಳಿಗೂ ವ್ಯಾಪಿಸಿದೆ. ಇದರಿಂದ ಪಾಕ್‌ ಸರ್ಕಾರ ತನ್ನ ಘನತೆ ಉಳಿಸಿಕೊಳ್ಳುವು ಕಷ್ಟವಾಗಿದೆ. ಅಚ್ಚರಿಯೆಂದರೆ ಪಾಕಿಸ್ತಾನಿ ಭಿಕ್ಷುಕರ ವಾರ್ಷಿಕ ಆದಾಯ 42 ಶತಕೋಟಿ ಡಾಲರ್‌ ತಲುಪಿದೆ ಅಂತ ಇತ್ತೀಚಿನ ವರದಿಯೊಂದು ತಿಳಿಸಿದೆ. ಸದ್ಯ 25 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನದ ಸಾಲವು ಜಿಡಿಪಿಯ 65.2% ರಷ್ಟಿದೆ. ತೆರಿಗೆ, ದೇಶ ಮತ್ತು ವಿದೇಶಿ ಸಾಲಗಳು, ಸರ್ಕಾರಿ ಸ್ವಾಮ್ಯದ ಆಸ್ತಿ ಮಾರಾಟ ಇವು ಪಾಕಿಸ್ತಾನದ ಆದಾಯ ಮೂಲಗಳಾಗಿವೆ.

Leave a Reply

Your email address will not be published. Required fields are marked *

error: Content is protected !!