ಉದಯವಾಹಿನಿ, ವಾಷಿಂಗ್ಟನ್:  ಟೈಟಾನಿಕ್ ಹಡಗಿನ ಅವಶೇಷ ವೀಕ್ಷಿಸುವ ಪ್ರವಾಸಕ್ಕೆ ತೆರಳಿದ ಜಲಾಂತರ್ಗಾಮಿ ನೌಕೆ ಸ್ಫೋಟಗೊಂಡು ನಾಶವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ‘ಟೈಟಾನಿಕ್’ ಸಿನಿಮಾ ನಿರ್ದೇಶಕ ಜೇಮ್ಸ್ ಕ್ಯಾಮರಾನ್, ಸಮುದ್ರ ಮೇಲ್ಭಾಗದ ಸಹಾಯಕ ಹಡಗಿನ ಜತೆಗಿನ ಸಂಪರ್ಕ ಕಳೆದುಕೊಂಡಾಗಲೇ ಸಬ್‌ಮೆರಿನ್ ಸ್ಫೋಟಗೊಂಡಿತ್ತು ಎಂಬ ಅನುಮಾನ ಮೂಡಿತ್ತು ಎಂದಿದ್ದಾರೆ. ಸಮುದ್ರದ ಅಡಿಯಲ್ಲಿನ ಜಗತ್ತನ್ನು ಪರಿಶೋಧಿಸುವುದರಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ ಕ್ಯಾಮರಾನ್ ಅವರು ಸಂಶೋಧನೆ ಹಾಗೂ ಪ್ರವಾಸಕ್ಕೆ ಸವಲತ್ತು ಒದಗಿಸುವ ಟ್ರಿಟಾನ್ ಸಬ್‌ಮೆರಿನ್‌ ಪಾಲುದಾರ ಮಾಲೀಕರೂ ಆಗಿದ್ದಾರೆ.

ತಮ್ಮ ಮೂಲಗಳಿಂದ ಬಂದ ಮಾಹಿತಿ ಆಧಾರದಲ್ಲಿ ಈ ತೀರ್ಮಾನಕ್ಕೆ ಬಂದಿದ್ದಾಗಿ ಅವರು ತಿಳಿಸಿದ್ದಾರೆ. “ಸಬ್‌ಮೆರಿನ್ ಸಂವಹನ ಸಂಪರ್ಕ ಕಳೆದುಕೊಂಡ ಸಮಯಕ್ಕೆ ಸರಿಯಾಗಿ ಭಾರಿ ಸದ್ದು ಉಂಟಾಗಿತ್ತು ಎಂದು ಒಂದು ಗಂಟೆಯ ಒಳಗೆ ನಮಗೆ ಮಾಹಿತಿ ಬಂದಿತ್ತು. ಹೈಡ್ರೋಫೋನ್‌ನಲ್ಲಿ ಜೋರಾದ ಸದ್ದು, ಟ್ರಾನ್ಸ್‌ಪಾಂಡರ್ ಸಂಪರ್ಕ ಕಡಿತ, ಸಂವಹನ ಕಡಿತ. ಏನಾಗಿದೆ ಎನ್ನುವುದು ನನಗೆ ಗೊತ್ತಾಗಿತ್ತು. ಸಬ್‌ಮೆರಿನ್ ಸ್ಫೋಟಗೊಂಡಿತ್ತು” ಎಂದು ಹೇಳಿದ್ದಾರೆ. ಓಷನ್‌ಗೇಟ್ ಕಾರ್ಬನ್ ಫೈಬರ್ ಹಾಗೂ ಟೈಟಾನಿಯಂ ಸಂಯೋಜಿತ ಕವಚ ಇರುವ ಸಬ್‌ಮರ್ಸಿಬಲ್ ನಿರ್ಮಿಸುತ್ತಿರುವುದು ಈ ಅನುಮಾನಕ್ಕೆ ಪುಷ್ಟಿ ನೀಡಿತ್ತು ಎಂದಿದ್ದಾರೆ. ಸ್ಫೋಟದ ಬಗ್ಗೆ ಗೊತ್ತಿದ್ದರೂ, ಅದರಲ್ಲಿ ಇದ್ದವರು ಜೀವಂತ ಸಿಗಬಹುದು ಎಂಬ ಆಶಯದೊಂದಿಗೆ ಅವರನ್ನು ಕಾಪಾಡುವ ಎಲ್ಲ ಪ್ರಯತ್ನಗಳನ್ನು ನಡೆಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!