ಉದಯವಾಹಿನಿ, ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಅಪಪ್ರಚಾರ, ಷಡ್ಯಂತ್ರ ದೂರವಾಗಿ, ಕ್ಷೇತ್ರದ ಶ್ರದ್ದೆಭಕ್ತಿ ಹೆಚ್ಚಾಗಲಿ ಎಂಬ ಸಂಕಲ್ಪದೊಂದಿಗೆ ಸಾಮೂಹಿಕ ಶಿವಪಂಚಾಕ್ಷರಿ ಓಂ ನಮಃ ಶಿವಾಯ ನಾಮ ಜಪ ಪಠಿಸಲು ವಿಶ್ವ ಹಿಂದೂ ಪರಿಷದ್ ಕರೆ ನೀಡಿದೆ.ಧರ್ಮಸ್ಥಳದ ಶ್ರೀ ಮಂಜುನಾಥನ ಶ್ರೀಕ್ಷೇತ್ರ ಕಳೆದ ಹಲವು ದಶಕಗಳಿಂದ ಸಹಸ್ರಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ನೂರಾರು ಧಾರ್ಮಿಕ ಕ್ಷೇತ್ರಗಳನ್ನು ಜೀರ್ಣೋದ್ದಾರಗೊಳಿಸುವ ಪವಿತ್ರ ಕಾರ್ಯವನ್ನು ಮಾಡಿಕೊಂಡು ಬಂದಿದೆ. ಜೊತೆಗೆ ಕ್ಷೇತ್ರದಲ್ಲಿ ನಿರಂತರ ಅನ್ನದಾನದ ಪುಣ್ಯ ಕಾರ್ಯ ಮಾಡುತ್ತಿದೆ. ರಾಜ್ಯ ದೇಶ ವಿದೇಶಗಳಿಂದ ಕೋಟ್ಯಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶಿವನ ದರ್ಶನ ಪಡೆದು ಧನ್ಯರಾಗುತ್ತಾರೆ. ನೂರಾರು ವರ್ಷಗಳ ಪರಂಪರೆ ಇರುವ ಒಂದು ನಂಬಿಕೆಯ ಶ್ರದ್ಧಾಕೇಂದ್ರವನ್ನು ಇವತ್ತು ಧರ್ಮ ವಿರೋಧಿ ಶಕ್ತಿಗಳು ವ್ಯಾಪಕವಾಗಿ ಷಡ್ಯಂತ್ರ ಮಾಡಿ ಅಪಪ್ರಚಾರವೆಸಗುವ ಮೂಲಕ ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವ ಸಂಚು ನಡೆಸುತ್ತಿದ್ದಾರೆ.
ಧರ್ಮಸ್ಥಳ ಪವಿತ್ರ ಶ್ರದ್ಧಾಕೇಂದ್ರವು ಧರ್ಮ ವಿರೋಧಿ ಶಕ್ತಿಗಳ ಷಡ್ಯಂತ್ರದಿಂದ ವ್ಯಾಪಕವಾಗಿ ಅಪಚಾರಕ್ಕೆ ಗುರಿಯಾಗಿದೆ, ಇಂತಹ ಷಡ್ಯಂತ್ರಗಳಿಗೆ ಸೋಲುಂಟಾಗಲು ಮತ್ತು ಅಪಪ್ರಚಾರ ಕೊನೆಯಾಗಿ ಕ್ಷೇತ್ರದಲ್ಲಿ ಶ್ರದ್ದೆಭಕ್ತಿ ಬೆಳಗಿ ಶಾಂತಿ ನೆಲಸಲಿ ಎಂಬ ಸಂಕಲ್ಪದೊಂದಿಗೆ ರಾಜ್ಯದಾದ್ಯಂತ 18 ಆಗಸ್ಟ್ 2025 ಸೋಮವಾರದಿಂದ ಒಂದು ವಾರದ ಕಾಲ ಸಾಮೂಹಿಕ ಶಿವಪಂಚಾಕ್ಷರಿ ಓಂ ನಮಃ ಶಿವಾಯ ಜಪ ಅನುಷ್ಟಾನಕ್ಕೆ ಎಲ್ಲ ಭಕ್ತರಲ್ಲಿ ವಿಶ್ವ ಹಿಂದೂ ಪರಿಷದ್ ಕರೆ ನೀಡುತ್ತಿದೆ.
