ಉದಯವಾಹಿನಿ, ವಿಜಯಪುರ: ಧರ್ಮಸ್ಥಳದ ಹೆಸರು ಕೆಡಿಸಲು ಉದ್ದೇಶಪೂರ್ವಕವಾಗಿ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದರು.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಬುರುಡೆ ಕೇಸ್ ವಿಷಯದಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. 13 ಕಡೆ ಅಗೆದರೂ ಏನು ಸಿಗಲಿಲ್ಲ. ಹಿಟಾಚಿಯಿಂದ ಅಗೆದರೂ ಏನು ಸಿಗದೇ ಇದ್ದ ಮೇಲೆ ಇದೊಂದು ಷಡ್ಯಂತ್ರವೇ ಹೌದು. ಕಮ್ಯುನಿಸ್ಟರು, ಬುದ್ಧಿಜೀವಿಗಳು, ಕಾಂಗ್ರೆಸ್‌ನ ಕೆಲವು ಹಿಂದೂ ವಿರೋಧಿಗಳ ಆಟವಿದು. ಕಾಂಗ್ರೆಸ್ ಹೈಕಮಾಂಡ್‌ನ ಆದೇಶದ ಮೇಲೆ ಸಿದ್ದರಾಮಯಯ್ಯನವರು ಎಸ್‌ಐಟಿ ರಚಿಸಿದ್ದಾರೆ ಎಂದರು.
ಅನಾಮಿಕ ದಿನೇ ದಿನೇ ಒಂದೊಂದು ಜಾಗ ಹೇಳ್ತಾನೆ. ಇನ್ನೂ 30 ಕಡೆ ಹೂತಿದೀನಿ ಅಂತಲೂ ಹೇಳುತ್ತಾನೆ. ಎಲ್ಲ ಕಡೆ ಅಗೆಯೋಕೆ ಆಗುತ್ತಾ? ಮುಂದೊಂದು ದಿನ ಧರ್ಮಸ್ಥಳ ಮಂಜುನಾಥ ಸ್ವಾಮಿ ಕೆಳಗೆ ಹೂತಿದ್ದೀನಿ ಅಂತ ಹೇಳಿದ್ರೆ, ಅಲ್ಲಿಯೂ ಶೋಧ ಮಾಡ್ತೀರಾ..? ಧರ್ಮಸ್ಥಳದ ಹೆಸರು ಕೆಡಿಸಲು ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ. ಅನಾಮಿಕ, ಯೂಟ್ಯುಬರ್ ಸಮೀರ್ ಎಂಡಿ, ತಿಮರೋಡಿ ಎಲ್ಲರ ಬ್ರೇನ್ ಮ್ಯಾಪಿಂಗ್ ಮಾಡಿ ಎಂದು ಆಗ್ರಹಿಸಿದರು.
ನೆಲದಲ್ಲಿ ಗುಂಡಿ ಅಗಿಯೋದು ಬಂದ್ ಮಾಡಬೇಕು. ಪೊಲೀಸರಿಗೆ ವಿಶ್ರಾಂತಿ ಸಿಗಲಿ. ಸರ್ಕಾರ ಎಸ್‌ಐಟಿ ರಚನೆ ಮಾಡಿದೆ, ಅದಕ್ಕೆ ಪೊಲೀಸರು ತನಿಖೆ ಮಾಡ್ತಿದ್ದಾರೆ ಅಷ್ಟೆ. ಪೊಲೀಸರ ಕಾರ್ಯ ಕೂಡ ಶ್ಲಾಘನೀಯ ಎಂದು ಹೇಳಿದರು.ಇದೇ ವೇಳೆ ಕಲಬುರಗಿಯ ಆರಾಧ್ಯ ದೈವ ಶರಣಬಸಪ್ಪ ಅಪ್ಪ ಅವರು ಲಿಂಗೈಕ್ಯರಾಗಿದ್ದು, ತೀವ್ರ ದುಃಖ ತಂದಿದೆ. ಅವರು ಶಿಕ್ಷಣ ದಾಸೋಹಿ, ಅನ್ನ ದಾಸೋಹಿ ಆಗಿದ್ದವರು. ಅವರ ಆತ್ಮಕ್ಕೆ ದೇವರು ಶಾಂತಿ ನೀಡಿಲಿ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ಭಕ್ತರಿಗೆ ನೀಡಲಿ. ಈಗಾಗಲೇ ಅವರ ಟ್ರಸ್ಟ್ನವರು ಮುಂದಿನ ಉತ್ತರಾಧಿಕಾರಿ ಆಯ್ಕೆ ಮಾಡಿದ್ದಾರೆ. ಅವರು ಮಠದ ಮುಂದಿನ ಜವಾಬ್ದಾರಿ ಹೊತ್ತು ಲಿಂಗೈಕ್ಯ ಶ್ರೀಗಳಂತೆ ಮುಂದುವರೆಯಲಿ ಎಂದು ಪಾರ್ಥಿಸಿದರು.
