ಉದಯವಾಹಿನಿ, ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರುಕ್ಮಿಣಿ ವಸಂತ್ ಸದ್ಯ ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ. 2023ರಲ್ಲಿ ತೆರೆಕಂಡ ಹೇಮಂತ್ ರಾವ್-ರಕ್ಷಿತ್ ಶೆಟ್ಟಿ ಕಾಂಬಿನೇಷನ್‌ನ ʼಸಪ್ತ ಸಾಗರದಾಚೆ ಎಲ್ಲೋʼ (Sapta Saagaradaache Ello) ಸೈಡ್ ಎ ಮತ್ತು ಸೈಡ್ ಬಿ ಚಿತ್ರದ ಮೂಲಕ ಪರಭಾಷಿಕರನ್ನೂ ಸೆಳೆದ ಅವರು ಇದೀಗ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಈ ಮಧ್ಯೆ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುವ ಅವಕಾಶವೊಂದು ಸಿಕ್ಕಿದೆ. ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ, ಹೊಂಬಾಳೆ ಫಿಲ್ಮ್ಸ್‌ನಿರ್ಮಾರ್ಣದ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದುವರೆಗೆ ಅವರು ನಟಿಸುತ್ತಿರುವ ವಿಚಾರವನ್ನು ಚಿತ್ರತಂಡ ಗುಟ್ಟಾಗಿ ಇಟ್ಟಿತ್ತು. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಅವರ ಫಸ್ಟ್ ಲುಕ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದೆ. ಇದರ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ಮಾತನಾಡಿದ ರುಕ್ಮಿಣಿ ʼಕಾಂತಾರʼ ಚಿತ್ರದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಚಿತ್ರದಲ್ಲಿ ಅವರು ಕದಂಬ ಸಾಮ್ರಾಜ್ಯದ ರಾಣಿ ಕನಕವತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಈ ಅವಕಾಶ ಸಿಕ್ಕಿದ್ದು ಕನಸು ನನಸಾದಂತಾಗಿದೆ ಎಂದು ಹೇಳಿದ್ದಾರೆ. ಸಿನಿಮಾ, ಪಾತ್ರದ ಬಗ್ಗೆ ಅವರು ಮನ ಬಿಚ್ಚಿ ಮಾತನಾಡಿದ್ದಾರೆ.
