ಉದಯವಾಹಿನಿ, ನವದೆಹಲಿ: ಬಿಜೆಡಿ ಸಂಸದರಿಗೆ ಅತ್ಯಾಚಾರ, ಕೊಲೆ ಬೆದರಿಕೆ ಒಡ್ಡಿರುವ ಮಹೀಂದ್ರಾ ಗ್ರೂಪ್ ಸಿಬ್ಬಂದಿಯ ಮೇಲೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಕಂಪೆನಿ ಹೇಳಿದೆ. ಈ ರೀತಿಯ ದುಷ್ಕೃತ್ಯ, ಬೆದರಿಕೆಗಳನ್ನು ಕಂಪೆನಿ ಸಹಿಸುವುದಿಲ್ಲ ಎಂದು ಹೇಳಿರುವ ಕಂಪೆನಿ, ಇದರ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವುದಾಗಿ ತಿಳಿಸಿದೆ. ವಿವಿಧ ರೀತಿಯ ಕಾರ್ಯಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸದಾ ಸುದ್ದಿಯಲ್ಲಿರುವ ಆನಂದ್ ಮಹೀಂದ್ರಾ ಅವರ ಒಡೆತನದ ಕಂಪೆನಿ ಈಗ ಬಿಜೆಡಿ ಸಂಸದರ ಆರೋಪಗಳಿಗೆ ತಕ್ಷಣ ಸ್ಪಂದಿಸಿರುವುದಕ್ಕೆ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾಮಾಜಿಕ ಮಾಧ್ಯಮದ ಮೂಲಕ ಮಹೀಂದ್ರಾ ಕಂಪೆನಿಯ ಸಿಬ್ಬಂದಿಯೊಬ್ಬ ಬಿಜೆಡಿ ಸಂಸದರಿಗೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿರುವುದಾಗಿ ಬಿಜು ಜನತಾದಳ (ಬಿಜೆಡಿ) ಸಂಸದೆ ಸುಲತಾ ಡಿಯೋ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹೀಂದ್ರಾ ಗ್ರೂಪ್ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಘಟನೆಯ ತನಿಖೆಯನ್ನು ಆರಂಭಿಸಲಾಗಿದೆ. ಆನಂದ್ ಮಹೀಂದ್ರಾ ಒಡೆತನದ ಕಂಪೆನಿಯು ಯಾವುದೇ ರೀತಿಯ ದುಷ್ಕೃತ್ಯ, ಬೆದರಿಕೆಗಳ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವುದಾಗಿ ತಿಳಿಸಿದೆ. ನಮ್ಮ ಉದ್ಯೋಗಿಗಳಲ್ಲಿ ಒಬ್ಬರು ಫೇಸ್‌ಬುಕ್‌ನಲ್ಲಿ ರಾಜಕೀಯ ನಾಯಕರೊಬ್ಬರಿಗೆ ಅಗೌರವ ಮತ್ತು ಅತ್ಯಂತ ಅನುಚಿತ ಸಂದೇಶಗಳನ್ನು ಕಳುಹಿಸಿರುವ ಮಾಹಿತಿ ಸಿಕ್ಕಿದೆ. ಮಹೀಂದ್ರಾ ಗ್ರೂಪ್ ಯಾವಾಗಲೂ ಮಾನವ ಘನತೆಯ ಮಹತ್ವವನ್ನು ಪ್ರತಿಪಾದಿಸುತ್ತದೆ. ಈ ತತ್ತ್ವಗಳ ಉಲ್ಲಂಘನೆಯನ್ನು ಸಹಿಸಲಾಗದು ಎಂದು ಕಂಪೆನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
