ಉದಯವಾಹಿನಿ, ರಾಮನಗರ: ದೇವಸ್ಥಾನದಲ್ಲಿ ಕಳವು ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚನ್ನಪಟ್ಟಣ ತಾಲೂಕಿನ ಎಂಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ದುಂಡನಹಳ್ಳಿ ಗ್ರಾಮದ ರಮೇಶ್ ಸಾವನ್ನಪ್ಪಿದ ವ್ಯಕ್ತಿ. ಎಂಕೆ ದೊಡ್ಡಿ ಪೊಲೀಸ್ ಠಾಣೆ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಮೇಶ್ ಶವ ಪತ್ತೆಯಾಗಿದೆ. ಶವವನ್ನ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಬೊಮ್ಮನಾಯಕನಹಳ್ಳಿ ದೇವಸ್ಥಾನದ ಕಳ್ಳತನ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಎಂಕೆ ದೊಡ್ಡಿ ಪೊಲೀಸರು, ರಮೇಶ್, ಮಂಜು ಹಾಗೂ ಕೋಲಾರದ ಅನಿಲ್ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು. ಇಂದು ಬೆಳಿಗ್ಗೆ ಶೌಚಾಲಯಕ್ಕೆಂದು ಹೋಗಿದ್ದ ರಮೇಶ್, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೂ ರಮೇಶ್ ಸಾವು ಲಾಕಪ್ ಡೆತ್ ಎಂದು ಕುಟುಂಬಸ್ಥರು ಆರೋಪಿಸಿದ್ದು, ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ಎದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ನ್ಯಾಯ ಸಿಗುವವರೆಗೂ ಶವ ಸ್ವೀಕರಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
