ಉದಯವಾಹಿನಿ, 2025ರ ಟಿ20 ಏಷ್ಯಾಕಪ್ (Asia Cup 2025) ಬರುವ ಸೆಪ್ಟೆಂಬರ್ 9 ರಿಂದ ಯುಎಇಲ್ಲಿ ಆರಂಭವಾಗಲಿದೆ. ವೇಳಾಪಟ್ಟಿಯ ಪ್ರಕಾರ ಈ ಟೂರ್ನಿಯ ಹೈವೋಲ್ಟೇಜ್ ಕದನ ಸೆಪ್ಟೆಂಬರ್ 14 ರಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಯಲಿದೆ. ಆದರೆ ಉಭಯ ದೇಶಗಳ ನಡುವೆ ಸಂಬಂಧ ಹದಗೆಟ್ಟಿರುವ ಕಾರಣ ಏಷ್ಯಾಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೀಗ ಹೊರಬಿದ್ದಿರುವ ತಾಜಾ ಮಾಹಿತಿಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯಕ್ಕೆ ಭಾರತ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ವರದಿಯಾಗಿದೆ.
ವಾಸ್ತವವಾಗಿ ಪಾಕಿಸ್ತಾನಿ ಭಯೋತ್ಪಾದಕರು ಪಹಲ್ಗಾಮ್ ಮೇಲೆ ದಾಳಿ ಮಾಡಿ ಅಮಾಯಕ ಪ್ರವಾಸಿಗರ ಹತ್ಯೆ ಮಾಡಿದ್ದರು.
ಇದರ ನಂತರ, ಭಾರತ ಸರ್ಕಾರ ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನದ ವಿರುದ್ಧ ಸಮರ ಸಾರಿತ್ತು. ಭಾರತದ ದಾಳಿಗೆ ನಲುಗಿದ್ದ ಪಾಕಿಸ್ತಾನ ಅಂತಿಮವಾಗಿ ಕದನ ವಿರಾಮಕ್ಕೆ ಮುಂದಾಯಿತು. ಇದಾದ ಬಳಿಕವೂ ಭಾರತ ಸರ್ಕಾರ ಪಾಕಿಸ್ತಾನದ ಜೊತೆ ಯಾವುದೇ ಮಾತುಕತೆಗೆ ಮುಂದಾಗಿರಲಿಲ್ಲ. ಹೀಗಾಗಿ ಉಭಯ ದೇಶಗಳ ಕ್ರಿಕೆಟ್ ತಂಡಗಳು ಮುಖಾಮುಖಿಯಾಗುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೀಗ ಕ್ರೀಡಾ ಸಚಿವಾಲಯ ಬದ್ಧವೈರಿಗಳ ಕಾಳಗಕ್ಕೆ ಹಸಿರು ನಿಶಾನೆ ತೋರಿಸಿದೆ.
