ಉದಯವಾಹಿನಿ, ಹಾಸನ: ಸಂಸದ ಶ್ರೇಯಸ್ ಪಟೇಲ್ ವಿರುದ್ಧದ ಆಸ್ತಿ ವಿವರ ಮುಚ್ಚಿಟ್ಟ ಆರೋಪದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಸಂಬಂಧ ವಕೀಲ ಪೂರ್ಣಚಂದ್ರ ತೇಜಸ್ವಿ, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಡಿಸಿ ಕಛೇರಿಯ ಕಟ್ಟಡದಲ್ಲಿರುವ ಸಂಸದರ ಕಛೇರಿಗೆ ನೋಟಿಸ್ ಅಂಟಿಸಿದ್ದಾರೆ. ಅಕ್ಟೋಬರ್ 6 ರಂದು ವಿಚಾರಣೆಗೆ ಹಾಜರಾಗಲು ನೋಟಿಸ್‍ನಲ್ಲಿ ಸೂಚಿಸಲಾಗಿದೆ.
ಲೋಕಸಭಾ ಚುನಾವಣೆ ವೇಳೆ ತಮ್ಮ ತಾತ ಮಾಜಿ ಸಂಸದ ಜಿ.ಪುಟ್ಟಸ್ವಾಮಿಗೌಡರ ಹೆಸರಿನಲ್ಲಿ ಬೆಂಗಳೂರಿನಲ್ಲಿರುವ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ ವಿವರ ಮುಚ್ಚಿಟ್ಟ ಆರೋಪ ಸಂಸದರ ಮೇಲಿದೆ. ಇನ್ನೂ ಚುನಾವಣೆಗೂ ಮುನ್ನ ತಾತನ ಆಸ್ತಿಗೆ ಸಂಸದರು ತೆರಿಗೆ ಕಟ್ಟಿದ್ದರು. ಈ ಹಿಂದೆ ಆಸ್ತಿ ವಿವರ ಮುಚ್ಚಿಟ್ಟ ಪ್ರಕರಣದಲ್ಲೇ ಸದಸ್ಯತ್ವದಿಂದ ಮಾಜಿ ಸಂಸದ ಪ್ರಜ್ವಲ್‍ರೇವಣ್ಣ ಅನರ್ಹಗೊಂಡಿದ್ದ. ಇದೇ ಆರೋಪದ ಕೇಸ್ ದಾಖಲಿಸಿ ಸದಸ್ಯತ್ವ ಅನರ್ಹಕ್ಕೆ ಜೆಡಿಎಸ್ (JDS) ಕೇಸ್ ದಾಖಲಿಸಿದೆ.
ಹೈಕೋರ್ಟ್‍ನಲ್ಲಿ ದಾಖಲಾದ ದೂರು ವಜಾಗೊಂಡಿದ್ದ ಹಿನ್ನೆಲೆ, ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಕೆ ಮಾಡಲಾಗಿದ್ದು, ದೂರು ಸ್ವೀಕಾರ ಮಾಡಿ, ಸುಪ್ರೀಂ ಕೋರ್ಟ್ ಅರ್ಜಿಯ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಈ ಬಗ್ಗೆ ಸಂಸದರಿಗೆ ನೋಟಿಸ್‍ನ್ನು ಖುದ್ದಾಗಿ ನಿಡುವುದಾಗಿಯೂ ವಕೀಲರು ತಿಳಿಸಿದ್ದಾರೆ.
