ಉದಯವಾಹಿನಿ, ಬೆಂಗಳೂರು: ಕಲಬುರಗಿಯಲ್ಲಿ ಗಣೇಶ ಹಬ್ಬ ಆಚರಣೆಗೆ ವಿಧಿಸಿರುವ ಷರತ್ತುಗಳ ವಿರುದ್ಧ ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದರು.
ಬಿಜೆಪಿ ಸದಸ್ಯ ಶಶೀಲ್ ನಮೋಶಿ ವಿಷಯ ಪ್ರಸ್ತಾಪ ಮಾಡಿ, ಗಣೇಶ ಹಬ್ಬಕ್ಕೆ ನಮ್ಮ ಜಿಲ್ಲೆಯಲ್ಲಿ ಡಿಜಿ, ಸೌಂಡ್ ಹಾಕಬಾರದು ಎಂದು ಸರ್ಕಾರ ಆದೇಶ ಮಾಡಿದೆ. ಬೆಂಗಳೂರಿನಲ್ಲಿ ಇಲ್ಲದ ನಿಯಮ ನಮಗೆ ಯಾಕೆ? ನಮ್ಮ ಜಿಲ್ಲೆಯಲ್ಲಿ ಗಣೇಶ ಹಬ್ಬ ವಿಜೃಂಭಣೆಯಿಂದ ಮಾಡಲು ಅವಕಾಶ ಕೊಡಿ. ಸ್ವಾತಂತ್ರ‍್ಯಕ್ಕಾಗಿ ತಿಲಕರು ಹಬ್ಬ ಶುರು ಮಾಡಿದರು. ಆಗ ಬ್ರಿಟಿಷರೇ ಅದಕ್ಕೆ ಅವಕಾಶ ಕೊಟ್ಟಿದ್ದರು. ಈಗ ಯಾಕೆ ಕಂಡೀಷನ್ ಹಾಕ್ತೀರಾ? ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಪ್ರದೀಪ್ ಶೆಟ್ಟರ್ ಮಾತನಾಡಿ, ಹಿಂದೂ ಹಬ್ಬಕ್ಕೆ ಯಾಕೆ ನಿಯಮ ಹಾಕ್ತೀರಾ? ಬೇರೆ ಅವರು ರಾತ್ರಿ ಎಲ್ಲಾ ಸೌಂಡ್ ಹಾಕೋಕೆ ಅವಕಾಶ ಕೊಡ್ತೀರಾ ಎಂದು ಆಗ್ರಹಿಸಿದರು. ಇದೇ ವೇಳೆ ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಗಣೇಶ ಹಬ್ಬಕ್ಕೆ ಇಡೀ ರಾಜ್ಯಕ್ಕೆ ಒಂದು ನಿಯಮ ಆಗಿರಬೇಕು. ಕಲಬುರಗಿ ರಿಪಬ್ಲಿಕ್ ಕಲಬುರಗಿ ಆಗಿದೆ. ಅಲ್ಲಿ ಬೇರೆ ಬೇರೆ ಕಾನೂನು ಇದೆ. ನಮ್ಮ ಹಬ್ಬ ಮಾಡೋಕೆ ನಾವು ಪರ್ಮಿಷನ್ ತಗೋಬೇಕಾ? ರಾಜ್ಯಕ್ಕೆ ಒಂದೇ ಕಾನೂನು ಮಾಡಿ. ಜಿಲ್ಲೆಗೆ ಒಂದು ನಿಯಮ ಬೇಡ ಎಂದು ಸರ್ಕಾರವನ್ನ ಒತ್ತಾಯಿಸಿದರು.
