ಉದಯವಾಹಿನಿ, ಬೆಂಗಳೂರು: ಬೈಕ್‌ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. 16 ವರ್ಷ ವಯಸ್ಸಿನ ಈ ಬಾಲಕರು ಕಳೆದ ಒಂದು ವರ್ಷದ ಅವಧಿಯಲ್ಲಿ ಬೆಂಗಳೂರು ಹಾಗೂ ಆಂಧ್ರ ಪ್ರದೇಶದ ವಿವಿದೆಡೆ ಒಟ್ಟು 44 ಬೈಕ್‌ಗಳನ್ನು ಕದ್ದಿದ್ದರು ಎಂಬ ವಿಚಾರ ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಬೈಕ್‌ಗಳು ಅದರಲ್ಲೂ ಗಿಯರ್‌ಲೆಸ್ ಸ್ಕೂಟರ್‌ಗಳನ್ನೇ ಗುರಿಯಾಗಿಸಿ ಕಾರ್ಯಾಚರಣೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಬೆಂಗಳೂರಿನ ವಿವಿದೆಡೆ ತಮ್ಮ ಕೈಚಳಕ ತೋರಿಸಿದ್ದರು. ಬೆಂಗಳೂರು ಮಾತ್ರವಲ್ಲ ಆಂಧ್ರ ಪ್ರದೇಶ ರಾಜ್ಯದಲ್ಲೂ ಈ ಬಾಲಕರು ಬೈಕ್ ಕದ್ದಿದ್ದರು. ಈ ಬಾಲಕರನ್ನು ಅವರ ಪೋಷಕರ ಸಮ್ಮುಖದಲ್ಲೇ ವಿಚಾರಣೆ ನಡೆಸಿದ ಪೊಲೀಸರು, ವಿಚಾರಣೆ ವೇಳೆ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳೂ ಜೊತೆಯಲ್ಲಿ ಇರುವಂತೆ ನೋಡಿಕೊಂಡಿದ್ದರು. ಬಾಲಕರು ಅಪ್ರಾಪ್ತರಾದ ಕಾರಣ ಅವರ ವಿಚಾರಣೆ ವೇಳೆ ಸೂಕ್ತ ಕಾನೂನು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗಿತ್ತು. ವಿಚಾರಣೆ ಬಳಿಕ ಬಾಲಕರನ್ನು ಬಾಲ ಕಾರಾಗೃಹಕ್ಕೆ ರವಾನೆ ಮಾಡಲಾಗಿದೆ.
