ಉದಯವಾಹಿನಿ, ಮಂಡ್ಯ: ಚಿನ್ನದಂಗಡಿಯಲ್ಲಿ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗುವ ವೇಳೆ ಕೃತ್ಯವನ್ನು ಕಂಡ ಹೋಟೆಲ್ ಮಾಲೀಕ ಮಾದಪ್ಪನನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಮುಖ ಆರೋಪಿಯೊಬ್ಬ ಹಲಗೂರು ಠಾಣೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ.
ಮಂಡ್ಯ ತಾಲೂಕಿನ ಈಚಗೆರೆ ಗ್ರಾಮದ ಕಿರಣ್ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣದ ಪ್ರಮುಖ ಆರೋಪಿ.ಮಳವಳ್ಳಿ ತಾಲ್ಲೂಕಿನ ಭೀಮನಹಳ್ಳಿ ಬಳಿ ಈತ ಅಡಗಿ ಕೊಂಡಿರುವ ಖಚಿತ ಮಾಹಿತಿ ಮೇರೆಗೆ ರಾತ್ರಿ 8.30 ರ ಸಮಯದಲ್ಲಿ ಆತನನ್ನು ಬಂಧಿಸಲು ಹಲಗೂರು ವೃತ್ತದ ಸಿಪಿಐ ಶ್ರೀಧರ್, ಕಿರುಗಾವಲು ಪಿಎಸ್ ಐ ರವಿಕುಮಾರ್ ಹಾಗೂ ಸಿಬ್ಬಂದಿ ತೆರೆಳಿದ್ದಾರೆ. ಪೊಲೀಸರನ್ನು ಕಂಡು ಆರೋಪಿ ಕಿರಣ್ ತಪ್ಪಿಸಿಕೊಳ್ಳಲು ಕಿರುಗಾವಲು ಪೊಲೀಸ್ ಠಾಣೆ ಕಾನ್ ಸ್ಟೇಬಲ್ ಶ್ರೀನಿವಾಸ್ ಅವರ ತೋಳಿಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಪೊಲೀಸರು ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಪೊಲೀಸರ ಮಾತನ್ನು ಲೆಕ್ಕಿಸದೇ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದಾಗ ಸಿಪಿಐ ಶ್ರೀಧರ್ ಅವರು ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ. ತಕ್ಷಣ ಆತನನ್ನು ಪೊಲೀಸರು ಸುತ್ತುವರೆದು ಬಂಧಿಸಿದ್ದಾರೆ.
