ಉದಯವಾಹಿನಿ, ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಯಾರು ಆಗಬೇಕು ಎಂಬುದನ್ನು ಬಹಿರಂಗ ಚರ್ಚೆ ಮಾಡುವುದು ಸರಿ ಅಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ನಾಯಕರೇ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ರಾಜ್ಯಾಧ್ಯಕ್ಷ ಆಗಬೇಕೆಂಬ ಆಸೆ ಇರುವುದು ಸಹಜ. ನಾನೂ ಬಿಜೆಪಿಯ ಹಿರಿಯ ನಾಯಕ. ಅವಕಾಶ ಕೊಟ್ಟರೆ ಜ್ಯಾಧ್ಯಕ್ಷನಾಗುತ್ತೇನೆ. ಬಿಜೆಪಿಯಲ್ಲಿ ದಲಿತರು ರಾಜ್ಯದ ಅಧ್ಯಕ್ಷರಾಗಬಾರದೇ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್‌ನವರು ಪ್ರಧಾನಿ ಮೇಲೆ ಆರೋಪ ಮಾಡುತ್ತಿದ್ದಾರೆ. ಅಕ್ಕಿ ಕೊಡುವ ಯೋಗ್ಯತೆ ಇಲ್ಲದಿದ್ದರೆ ಗ್ಯಾರಂಟಿ ಘೋಷಣೆ ಏಕೆ ಮಾಡಿದರು? ಸಿದ್ದರಾಮಯ್ಯ ಅವರು ಪ್ರಧಾನಿಯನ್ನು ಕೇಳಿ ಘೋಷಣೆ ಮಾಡಿದರಾ? ಕೇಂದ್ರ ಸರ್ಕಾರ ಕೇವಲ ಕರ್ನಾಟಕಕ್ಕೆ ಅಷ್ಟೇ ಅಲ್ಲ, ಬೇರೆ ರಾಜ್ಯಗಳಿಗೂ ಅಕ್ಕಿ ವಿತರಣೆ ಮಾಡಬೇಕು. ಬಡ ವರ್ಗದ ಜನರನ್ನು ಕಾಂಗ್ರೆಸ್ ಏನು ಗುತ್ತಿಗೆ ಪಡೆದಿದೆಯೇ ಎಂದು ರಮೇಶ ಪ್ರಶ್ನಿಸಿದರು. ಚುನಾವಣೆ ವೇಳೆ ಸಿದ್ದರಾಮಯ್ಯ ತೋಳು, ಲುಂಗಿ ಏರಿಸಿ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಅಂದಿದ್ದರು, ಕೊಡಬೇಕಷ್ಟೇ ಎಂದರು. ಗ್ಯಾರಂಟಿ ಯೋಜನೆಗಳು ಜಾರಿಯಾಗುವುದು ಅನುಮಾನ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯುವುದೂ ಅನುಮಾನ ಎಂದರು. ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು. ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಮೋದಿ ಆಡಳಿತಕ್ಕೆ ಜಗತ್ತೇ ಬೆರಗಾಗಿದೆ ಎಂದರು.
