ಉದಯವಾಹಿನಿ, ನವದೆಹಲಿ: ಕಳೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದ 14ನೇ ವಯಸ್ಸಿನ ವೈಭವ್ ಸೂರ್ಯವಂಶಿಯನ್ನು (Vaibhav Suryavanshi) ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು (Ambati Rayudu) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವೈಭವ್ ಸೂರ್ಯವಂಶಿ ವಿಶೇಷ ಪ್ರತಿಭೆಯನ್ನು ತಮ್ಮ ಬ್ಯಾಟಿಂಗ್‌ನಲ್ಲಿ ಹೊಂದಿದ್ದಾರೆ. ಈ ಕಾರಣದಿಂದ ಅವರು ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಅವರ ಬಳಿ ಉಪಯುಕ್ತ ಸಲಹೆಯನ್ನು ಪಡೆಯಬೇಕೆಂದು ಆಗ್ರಹಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುವ ಯುವ ಬ್ಯಾಟ್ಸ್‌ಮನ್ ಗುಜರಾತ್ ಟೈಟನ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಅದ್ಭುತ ಶತಕ ಗಳಿಸುವ ಮೂಲಕ ಸುದ್ದಿಯಾಗಿದ್ದರು. ಎಡಗೈ ಬ್ಯಾಟ್ಸ್‌ಮನ್ 38 ಎಸೆತಗಳಲ್ಲಿ ಏಳು ಬೌಂಡರಿ ಮತ್ತು 11 ಸಿಕ್ಸರ್‌ಗಳೊಂದಿಗೆ 101 ರನ್ ಗಳಿಸಿದ್ದರು. ಆ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ 210 ರನ್‌ಗಳ ಬೃಹತ್ ಗುರಿಯನ್ನು ಇನ್ನೂ 25 ಎಸೆತಗಳು ಬಾಕಿ ಇರುವಾಗ ತಲುಪಿತ್ತು.
ಅವರ ಬ್ಯಾಟಿಂಗ್ ವೇಗ ಅಸಾಧಾರಣ. ಅವರು ಉತ್ತಮವಾಗಬೇಕು. ಲಾರಾ ಅವರಂತಹ ಯಾರಾದರೂ… ಬಹುಶಃ ಹೋಗಿ ಅವರೊಂದಿಗೆ ಮಾತನಾಡಬೇಕು. ಅವರು ಇದೇ ರೀತಿಯ ಬ್ಯಾಟ್ ಲಿಫ್ಟ್ ಅನ್ನು ಸಹ ಹೊಂದಿದ್ದರು. ಆದ್ದರಿಂದ ನೀವು ಡಿಫೆಂಡ್ ಮಾಡುವಾಗ ಮತ್ತು ನೀವು ಮೃದುವಾದ ಕೈಯಿಂದ ಆಡುವಾಗ ಬ್ಯಾಟ್ ವೇಗವನ್ನು ಹೇಗೆ ನಿಯಂತ್ರಿಸಬೇಕೆಂದು ಅವರು ಕಲಿಯಬಹುದು. ಆದ್ದರಿಂದ ವೈಭವ್ ಅದನ್ನು ಕಲಿತರೆ, ಅವರು ಅಸಾಧಾರಣ ಪ್ರತಿಭೆಯಾಗುತ್ತಾರೆ,” ಎಂದು ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ರಾಯುಡು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಅವರು ಅತ್ಯಂತ ಅಪರೂಪದ ಪ್ರತಿಭಾವಂತ ಹಾಗೂ ಅವರಿಗೆ ಸರಿಯಾದ ಹಾದಿಯಲ್ಲಿ ಮಾರ್ಗದರ್ಶನವನ್ನು ನೀಡಿದರೆ, ಅವರು ಮುಂದಿನ ದಿನಗಳಲ್ಲಿ ಅದ್ಭುತ ಆಟಗಾರ ಆಗಲಿದ್ದಾರೆ. ಅಲ್ಲದೆ ಜನರು ತಮ್ಮ ಬಗ್ಗೆ ಏನು ಮಾತನಾಡುತ್ತಾರೆಂಬುದರ ಕಡೆಗೆ ಯುವ ಬ್ಯಾಟ್ಸ್‌ಮನ್ ಗಮನವನ್ನು ನೀಡಬಾರದು ಎಂದು ಇದೇ ಸಿಎಸ್‌ಕೆ ಮಾಜಿ ಬ್ಯಾಟ್ಸ್‌ಮನ್ ತಿಳಿಸಿದ್ದಾರೆ. “ಇವರು ಒಂದೇ ಒಂದು ಅಂಶದ ಕಡೆಗೆ ಗಮನ ನೀಡಬೇಕು, ಅದೇನೆಂದರೆ ಅವರು ಜನರ ಮಾತುಗಳಿಗೆ ಕಿವಿ ಕೊಡಬಾರದು. ಜವರು ಮಾತಿಗೆ ಮನ್ನಣೆ ನೀಡಬಾರದು ಹಾಗೂ ತಮ್ಮ ಪ್ರತಿಭೆಯನ್ನು ಬೆಂಬಲಿಸಬೇಕು. ಇನ್ನು ಕೋಚ್‌ಗಳು ಕೂಡ ಜಾಸ್ತಿ ಸಲಹೆಗಳನ್ನು ಯುವ ಬ್ಯಾಟ್ಸ್‌ಮನ್‌ಗೆ ನೀಡಬಾರದು,” ಎಂದು ಅಂಬಾಟಿ ರಾಯುಡು ತಿಳಿಸಿದ್ದಾರೆ.
