ಉದಯವಾಹಿನಿ, ನವದೆಹಲಿ/ಕೈವ್: ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಇಡೀ ವಿಶ್ವಕ್ಕೆ ಗೊತ್ತಿದೆ. ಅಮೆರಿಕ ಭಾರತದ ಮೇಲೆ ಶಕ್ತಿ ಪ್ರದರ್ಶನಕ್ಕೆ ಮುಂದಾದಾಗಲೆಲ್ಲ ರಷ್ಯಾ, ನಮ್ಮ ದೇಶದ ಜೊತೆಗೆ ನಿಂತಿರೋದಕ್ಕೆ ಹಲವು ಉದಾಹರಣೆಗಳಿವೆ. ಅದೇ ಸಮಯದಲ್ಲಿ ಭಾರತ-ಉಕ್ರೇನ್ ಜೊತೆಗೂ ಸ್ನೇಹದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಈ ವರ್ಷಾಂತ್ಯಕ್ಕೆ ಇಬ್ಬರೂ ವಿಶ್ವನಾಯಕರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಹೌದು. ಪ್ರಧಾನಿ ನರೇಂದ್ರ ಮೋದಿ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನ ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದ್ದಾರೆ. ಈ ವರ್ಷಾಂತ್ಯದ ವೇಳೆಗೆ ರಷ್ಯಾ ಅಧ್ಯಕ್ಷ ಪುಟಿನ್ ಸಹ ಭಾರತಕ್ಕೆ ಭೇಟಿ ನೀಡುವುದು ಖಚಿತವಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಬಲ್ಯ ಹೆಚ್ಚಾಗುತ್ತಿರುವುದಕ್ಕೆ ಹಿಡಿದ ಕನ್ನಡಿಯಾಗಿದೆ.
ಈ ಕುರಿತು ಉಕ್ರೇನಿಯನ್ ರಾಯಭಾರಿ ಓಲೆಕ್ಸಾಂಡರ್ ಪೋಲಿಷ್‌ಚುಕ್ ಮಾತನಾಡಿ, ಭಾರತ ಮತ್ತು ಉಕ್ರೇನ್ ನಡುವಿನ ಭವಿಷ್ಯದ ಕಾರ್ಯತಂತ್ರಗಳು ವೇಗವಾಗಿ ಸಾಗುತ್ತಿವೆ. ಪ್ರಧಾನಿ ಮೋದಿ ಅವರು ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ. ಇದಕ್ಕೆ ಝಲೆನ್ಸ್ಕಿ ಸಹ ಒಪ್ಪಿದ್ದು, ದಿನಾಂಕವನ್ನು ನಿಗದಿಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಝೆಲೆನ್ಸ್ಕಿ ಅವರ ಭಾರತ ಭೇಟಿಯು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಪ್ರಮುಖ ಹೆಜ್ಜೆಯಾಗಲಿದೆ ಎಂದು ತಿಳಿಸಿದ್ದಾರೆ.
