ಉದಯವಾಹಿನಿ, ಲಕ್ನೋ: ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಯನ್ನು ಆಕೆಯ ಪತಿ ಮತ್ತು ಅತ್ತೆ-ಮಾವ ಹತ್ಯೆ ಮಾಡಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಇದೀಗ ಮಹಿಳೆಯ ಹತ್ಯೆಯ ಭಯಾನಕ ದೃಶ್ಯ ಕಂಡ ಆಕೆಯ ಪುಟ್ಟ ಮಗ, ಮಾಧ್ಯಮಗಳ ಮುಂದೆ ತಂದೆ, ಅಜ್ಜ ಹಾಗೂ ಅಜ್ಜಿಯ ಕ್ರೌರ್ಯವನ್ನು ಬಿಚ್ಚಿಟ್ಟಿದ್ದಾನೆ.ಬಾಲಕ ಮಾಧ್ಯಮಗಳ ಮುಂದೆ, ಅಪ್ಪ, ಅಜ್ಜ ಮತ್ತು ಅಜ್ಜಿ ಸೇರಿ ಅಮ್ಮನ ಕೆನ್ನೆಗೆ ಹೊಡೆದ್ರೂ, ಆಮೇಲೆ ಅಮ್ಮನ ಮೇಲೆ ಏನೋ ಹಾಕಿ ಬೆಂಕಿ ಹಚ್ಚಿದ್ರೂ ಎಂದು ಹೇಳಿದ್ದಾನೆ.
ನಿಕ್ಕಿ (26) ಕೊಲೆಯಾದ ಮಹಿಳೆ. ಪತಿ ಮತ್ತು ಅತ್ತೆ-ಮಾವ ಸೇರಿಕೊಂಡು ಆಕೆಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. ಮಹಿಳೆಗೆ 36 ಲಕ್ಷ ರೂ. ವರದಕ್ಷಿಣೆಗಾಗಿ ಬೇಡಿಕೆ ಇಟ್ಟು, ಚಿತ್ರಹಿಂಸೆ ನೀಡುತ್ತಿದ್ದರು ಎಂದು ಮೃತ ಮಹಿಳೆಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಸಂತ್ರಸ್ತೆಯ ಪತಿ ಮತ್ತು ಆಕೆಯ ಅತ್ತೆ, ಮಹಿಳೆಯ ಕೂದಲನ್ನು ಹಿಡಿದು ಥಳಿಸುತ್ತಿರುವ ವೀಡಿಯೊದಲ್ಲಿ ವೈರಲ್ ಆಗಿದೆ. ಅಲ್ಲದೇ ಬಳಿಕ ಬೆಂಕಿ ಹೊತ್ತಿ ಉರಿಯುವಾಗ ಆಕೆ ಮೆಟ್ಟಿಲಿನಿಂದ ಇಳಿದು, ನೆಲದ ಮೇಲೆ ಕುಳಿತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಆಕೆಯನ್ನು ನೆರೆಹೊರೆಯವರ ಸಹಾಯದಿಂದ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾರ್ಗ ಮಧ್ಯೆಯೇ ಮಹಿಳೆ ಸಾವನ್ನಪ್ಪಿದ್ದಾಳೆ.
