ಉದಯವಾಹಿನಿ, ಮಂಡಿಯಾಲ: ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಎಲ್‌ಪಿಜಿ ಟ್ಯಾಂಕರ್ ಸ್ಫೋಟಗೊಂಡು ಏಳು ಜನರು ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಪಂಜಾಬ್ ನ (Punjab) ಹೋಶಿಯಾರ್‌ಪುರ- ಜಲಂಧರ್ ರಸ್ತೆಯ ಮಂಡಿಯಾಲ ಅಡ್ಡಾ ಬಳಿ ನಡೆದಿದೆ. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ. ಟ್ಯಾಂಕರ್ ಚಾಲಕ ಸುಕ್‌ಜೀತ್ ಸಿಂಗ್ ಸೇರಿದಂತೆ ಬಲ್ವಂತ್ ರೈ, ಧರ್ಮೇಂದರ್ ವರ್ಮಾ, ಮಂಜಿತ್ ಸಿಂಗ್, ವಿಜಯ್, ಜಸ್ವಿಂದರ್ ಕೌರ್ ಮತ್ತು ಆರಾಧನಾ ವರ್ಮಾ ಎಂಬವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ಯಾಂಕರ್ ರಾಮ್ ನಗರ್ ಧೇಹಾ ಲಿಂಕ್ ರಸ್ತೆಯ ಕಡೆಗೆ ತಿರುಗುತ್ತಿದ್ದಾಗ ಪಿಕಪ್ ಟ್ರಕ್‌ಗೆ ಡಿಕ್ಕಿ ಹೊಡೆದು ಮಾರಕ ಸ್ಫೋಟ ಸಂಭವಿಸಿತು. ಈ ಸಂದರ್ಭದಲ್ಲಿ ತೀವ್ರ ಸುಟ್ಟ ಗಾಯಗಳಾಗಿದ್ದ ಆರಾಧನಾ ವರ್ಮಾ ಅವರನ್ನು ಅಮೃತಸರಕ್ಕೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಅಮೃತಸರ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಪವನ್ ಕುಮಾರ್ ಹೇಳಿದರು.ಗಾಯಾಳುಗಳಲ್ಲಿ ಬಲ್ವಂತ್ ಸಿಂಗ್, ಹರ್ಬನ್ಸ್ ಲಾಲ್, ಅಮರ್‌ಜೀತ್ ಕೌರ್, ಸುಖಜೀತ್ ಕೌರ್, ಜ್ಯೋತಿ, ಸುಮನ್, ಗುರುಮುಖ್ ಸಿಂಗ್, ಹರ್‌ಪ್ರೀತ್ ಕೌರ್, ಕುಸುಮಾ, ಭಗವಾನ್ ದಾಸ್, ಲಾಲಿ ವರ್ಮಾ, ಸೀತಾ, ಅಜಯ್, ಸಂಜಯ್, ರಾಘವ್ ಮತ್ತು ಪೂಜಾ ಸೇರಿದ್ದು, ಇವರಲ್ಲಿ ಕೆಲವರನ್ನು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.ಘಟನೆಯ ಭಯಾನಕ ಕ್ಷಣಗಳನ್ನು ನೆನಪಿಸಿಕೊಂಡ ಮಂಡಿಯಾಲ ನಿವಾಸಿ ಗುರುಮುಖ್ ಸಿಂಗ್, ಭಾರಿ ಸ್ಫೋಟದ ಶಬ್ದ ಕೇಳಿಸಿತು. ಇದ್ದಕ್ಕಿದ್ದಂತೆ ಬೆಂಕಿ ನಮ್ಮನ್ನು ಸುತ್ತುವರೆದಿತ್ತು. ಹೆಂಡತಿ, ಮಗಳು ಮತ್ತು ಸೊಸೆಗೆ ಸುಟ್ಟ ಗಾಯಗಳಾಗಿದೆ. ಹೇಗೋ, ನಾನು ನನ್ನ ಮೊಮ್ಮಗನನ್ನು ಕಂಬಳಿಯಲ್ಲಿ ಸುತ್ತಿ ಅಪಾಯದಿಂದ ರಕ್ಷಿಸಿದೆ ಎಂದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹೋಶಿಯಾರ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ತನಿಖೆ) ಮುಖೇಶ್ ಕುಮಾರ್, ಬುಲ್ಲೋವಾಲ್ ಪೊಲೀಸ್ ಠಾಣೆಯ ಎಸ್ ಹೆಚ್ ಒ ಸಬ್-ಇನ್ಸ್‌ಪೆಕ್ಟರ್ ಮಣೀಂದರ್ ಸಿಂಗ್, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 105 ಮತ್ತು 324(4) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
