ಉದಯವಾಹಿನಿ, ಲಖನೌ: ದಲಿತ ಎಂಜಿನಿಯರ್ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಬಲ್ಲಿಯಾದಲ್ಲಿರುವ ವಿದ್ಯುತ್ ಇಲಾಖೆಯ ಕಚೇರಿಯಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತ ಕಚೇರಿಯ ಕ್ಯಾಬಿನ್ ಒಳಗೆ ಹಲ್ಲೆ ನಡೆಸಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಂಜಿನಿಯರ್ ತಲೆಗೆ ಶೂನಿಂದ ಹೊಡೆದು, ಜಾತಿ ನಿಂದನೆ ಮಾಡಿ ನಿಂದಿಸಿದ್ದಾನೆ ಎಂದು ವರದಿಯಾಗಿದೆ.
ಎಂಜಿನಿಯರ್ ದೂರಿನ ಪ್ರಕಾರ, ಬಿಜೆಪಿಯ ಮಾಜಿ ಮಂಡಲ ಅಧ್ಯಕ್ಷ ಮುನ್ನಾ ಬಹದ್ದೂರ್ ಸಿಂಗ್ ನೇತೃತ್ವದಲ್ಲಿ ಸುಮಾರು 20 ರಿಂದ 25 ಜನರು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಅವರ ಕಚೇರಿಗೆ ನುಗ್ಗಿ ಹಲ್ಲೆ ನಡೆಸಲು ಪ್ರಾರಂಭಿಸಿದರು. ಮುನ್ನಾ ಬಹದ್ದೂರ್ ಸಿಂಗ್, ಅಧಿಕಾರಿಯ ಮೇಲೆ ಹಲ್ಲೆ ನಡೆಸುತ್ತಾ ಕೋಪದಿಂದ ಕೂಗಾಡುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ನಂತರ ಸಿಂಗ್ ಶೂ ಹಿಡಿದು ಎಂಜಿನಿಯರ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ಹಲ್ಲೆ ನಡೆಸುವುದನ್ನು ನಿಲ್ಲಿಸಿದರು. ಕಚೇರಿಯ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲವಾಗಿದ್ದರಿಂದ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಮತ್ತೊಬ್ಬ ಸಿಬ್ಬಂದಿ ರೆಕಾರ್ಡ್ ಮಾಡಿದ್ದಾರೆ ಎಂದು ಎಂಜಿನಿಯರ್ ಹೇಳಿದರು. ಘಟನೆಯ ನಂತರ, ಎಂಜಿನಿಯರ್ ವೈದ್ಯಕೀಯ ತಪಾಸಣೆ ನಡೆಸಿ, ಪೊಲೀಸರಿಗೆ ದೂರು ನೀಡಿದ್ದಾರೆ.
