
ಉದಯವಾಹಿನಿ, ವಾಷಿಂಗ್ಟನ್: ಮನುಷ್ಯನ ಸಾವಿನ ನಂತರ ಸ್ವರ್ಗ-ನರಕ ಎಂಬ ಪರಿಕಲ್ಪನೆ ಇದೆ. ಜೀವಂತವಿರುವಾಗ ಭೂಮಿಯಲ್ಲಿ ವಾಸಿಸುವ ಮಾನವ, ಸತ್ತ ಮೇಲೆ ತನ್ನ ಕರ್ಮಾನುಸಾರ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾನೆ ಎಂಬ ನಂಬಿಕೆಯಿದೆ. ಸಾವಿನಲ್ಲೂ ಸಹ, ಕೆಲವರು ಅಸಾಧಾರಣ ಅನುಭವಗಳನ್ನು ಹೊಂದಿದ್ದಾರೆಂದು ಹೇಳಿಕೊಳ್ಳುತ್ತಾರೆ. ಆದರೆ, ಬಹಳಷ್ಟು ಮಂದಿ ಇದರ ಬಗ್ಗೆ ನಂಬಿಕೆ ಹೊಂದಿಲ್ಲ. ಸಾವಿನ ನಂತರ (Life after death) ಏನಾಗುತ್ತದೆ ಎಂಬ ಬಗ್ಗೆ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ, ಭಾರತೀಯ ಮೂಲದ ವೈದ್ಯರೊಬ್ಬರು (Doctor) ಮರಣಾ ನಂತರದ ಜೀವನವನ್ನು ಸ್ವತಃ ಅನುಭವಿಸುವವರೆಗೆ ನಂಬಿರಲಿಲ್ಲ.
ಹೌದು, ಅರಿವಳಿಕೆ ತಜ್ಞ ಡಾ. ರಾಜೀವ್ ಎಂಬುವವರು ಸಾವಿನ ಸಮೀಪ ಅನುಭವವನ್ನು ಪಡೆದ ನಂತರ ಅವರ ನಂಬಿಕೆ ಮತ್ತು ಅವರ ಇಡೀ ಜೀವನ ತಲೆಕೆಳಗಾಗಿತ್ತು. ಡಾ. ರಾಜೀವ್ ಅಮೆರಿಕದ ಕ್ಯಾಲಿಫೋರ್ನಿಯಾದ ಬೇಕರ್ಸ್‌ಫೀಲ್ಡ್ ಹೃದಯ ಆಸ್ಪತ್ರೆಯಲ್ಲಿ ಮುಖ್ಯ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. 2008 ರಲ್ಲಿ, 51ನೇ ವಯಸ್ಸಿನಲ್ಲಿ, ಅವರು ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಅವರ ಹೃದಯ ನಿಂತುಹೋಯಿತು. ಅವರು ಪರಲೋಕಕ್ಕೆ ಪ್ರಯಾಣಿಸಿದ್ದಾರೆ.
ಶಸ್ತ್ರಚಿಕಿತ್ಸಾ ಬೆಡ್ ಮೇಲೆ ಅವರ ದೇಹವು ಮಲಗಿದ್ದಾಗ, ಡಾ. ರಾಜೀವ್ ಅವರು ಮೇಲೆ ತೇಲುತ್ತಾ ಬಂದು ಶಸ್ತ್ರಚಿಕಿತ್ಸೆ ನಡೆಯುವುದನ್ನು ಗಮನಿಸಿದ್ದಾಗಿ ಹೇಳಿಕೊಂಡರು. ಅಷ್ಟೇ ಅಲ್ಲ, ಭಾರತದ ದೆಹಲಿಯಲ್ಲಿ ವಾಸವಿರುವ ತಮ್ಮ ತಾಯಿ ಮತ್ತು ಸಹೋದರಿಯನ್ನು ಅಲ್ಲಿಂದಲೇ ನೋಡುತ್ತಿದ್ದರು. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, ಡಾ. ರಾಜೀವ್ ತಮ್ಮ ಪ್ರಯಾಣದ ಮುಂದಿನ ಭಯಾನಕ ಹಂತವನ್ನು ವಿವರಿಸಿದ್ದಾರೆ.
