ಉದಯವಾಹಿನಿ, ಇದು ಸ್ಮಾರ್ಟ್ ಯುಗ, ಪ್ರತಿಯೊಂದಕ್ಕೂ ಸ್ಮಾರ್ಟ್ ಟಚ್! ಇದಕ್ಕೆ ತಕ್ಕಂತೆ ಗ್ರಾಮಗಳು ಸಹ ನಿಧಾನವಾಗಿ ಸ್ಮಾರ್ಟ್ ಆಗುತ್ತಿವೆ. ಇದೀಗ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಾಗ್ಪುರ ಜಿಲ್ಲೆಯ ಸತ್ನವ್ರಿಯಲ್ಲಿ ಸ್ಮಾರ್ಟ್ ಇಂಟೆಲಿಜೆಂಟ್ ವಿಲೇಜ್ ಯೋಜನೆ ಘೋಷಿಸಿದ್ದಾರೆ. ಈ ಯೋಜನೆಯ ವಿಶೇಷವೇನು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
ನಾಗ್ಪುರ ನಗರದಿಂದ 31 ಕಿಮೀ ದೂರದಲ್ಲಿರುವ 1,800 ಜನಸಂಖ್ಯೆ ಹೊಂದಿರುವ ಸತ್ನವ್ರಿ ಗ್ರಾಮವನ್ನು ಸ್ಮಾರ್ಟ್ ಇಂಟೆಲಿಜೆಂಟ್ ವಿಲೇಜ್ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಯೋಜನೆಯಲ್ಲಿ ಕೃಷಿ ಮತ್ತು ಟೆಲಿಮೆಡಿಸಿನ್‌ನಿಂದ ಹಿಡಿದು AI-ಚಾಲಿತ ನೀರಿನ ಮೇಲ್ವಿಚಾರಣೆ ವ್ಯವಸ್ಥೆ ಮತ್ತು ಡಿಜಿಟಲ್ ತರಗತಿಗಳನ್ನು ತೆರೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಯೋಜನೆಯನ್ನು ಟೆಲಿಕಾಂ ವಲಯದ ವಾಯ್ಸ್ ಆಫ್ ಇಂಡಿಯನ್ ಕಮ್ಯುನಿಕೇಷನ್ ಟೆಕ್ನಾಲಜಿ ಎಂಟರ್‌ಪ್ರೈಸಸ್ (VoICE) ಪ್ರಸ್ತಾಪಿಸಿತ್ತು.
‘ಸ್ಮಾರ್ಟ್ ಇಂಟೆಲಿಜೆಂಟ್ ವಿಲೇಜ್’ ಎಂದರೆ ಏನು?
ಹಳ್ಳಿಗಳಲ್ಲಿ ದೈನಂದಿನ ಜೀವನವನ್ನು ಸುಧಾರಿಸಲು ಡಿಜಿಟಲ್ ತಂತ್ರಜ್ಞಾನ, ಇಂಟರ್ನೆಟ್, ಕೃತಕ ಬುದ್ಧಿಮತ್ತೆ (AI) ಮತ್ತು ತಡೆರಹಿತ ಸಂಪರ್ಕ ವ್ಯವಸ್ಥೆಯನ್ನು ಈ ಯೋಜನೆಯಿಂದ ಕಲ್ಪಿಸಲಾಗಿದೆ. ಈ ಯೋಜನೆ ಸತ್ನವೇರಿ ಜಿಲ್ಲೆಯಲ್ಲಿ ಯಶಸ್ಸು ಕಂಡರೆ ಮಹಾರಾಷ್ಟ್ರದ ವಿವಿಧ ಭಾಗಗಳು ಸೇರಿದಂತೆ, ದೇಶಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ.
ಯೋಜನೆಗೆ ಸತ್ನವ್ರಿಯನ್ನೇ ಏಕೆ ಆಯ್ಕೆ ಮಾಡಲಾಗಿದೆ?
ಯೋಜನೆಗೆ ಗುರುತಿಸಲಾದ ಎಲ್ಲಾ ಮಾನದಂಡಗಳು ಸತ್ನವ್ರಿಯಲ್ಲಿದೆ. ಒಂದು ಕೊಳ, ಕೃಷಿ ಭೂಮಿ, ಶಾಲೆಗಳು, ಅಂಗನವಾಡಿ, ಎಲ್ಲಾ ಸಮುದಾಯಗಳ ಪ್ರಮುಖ ಸ್ಥಳಗಳನ್ನು ಈ ಹಳ್ಳಿ ಹೊಂದಿದೆ. ಇದೇ ಕಾರಣಕ್ಕೆ ಸತ್ನವರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನಾಗ್ಪುರ ಜಿಲ್ಲಾ ಪರಿಷತ್, ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮಸ್ಥರ ನೆರವಿನಿಂದ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ.
ಹೇಗಿರಲಿದೆ ಸ್ಮಾರ್ಟ್ ವಿಲೇಜ್? ಕೃಷಿಯಲ್ಲಿ ಸ್ಮಾರ್ಟ್ ಯೋಜನೆ: ಕೃಷಿಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಮಣ್ಣು ಮತ್ತು ಬೆಳೆಯ ಸ್ಥಿತಿಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ರೈತರು 25%-40% ನೀರನ್ನು ಉಳಿಸಲು, ರಸಗೊಬ್ಬರಗಳ ವೆಚ್ಚವನ್ನು 30% ರಷ್ಟು ಕಡಿಮೆ ಮಾಡಲು, ಕೀಟಗಳ ಸಮಸ್ಯೆಯನ್ನು ಮೊದಲೇ ಪತ್ತೆಹಚ್ಚಲು ಮತ್ತು ಇಳುವರಿಯನ್ನು 25% ವರೆಗೆ ಹೆಚ್ಚಿಸಲು ಈ ಯೋಜನೆ ಸಹಾಯ ಮಾಡುತ್ತದೆ.
