ಉದಯವಾಹಿನಿ, ಅಮೆರಿಕದ ಫ್ಲೋರಿಡಾದ ಟಂಪಾ ನಗರದಲ್ಲಿ 8ನೇ ನಾವಿಕ ವಿಶ್ವ ಕನ್ನಡ ಸಮಾವೇಶ (NAVIKA 2025) ಅದ್ಧೂರಿಯಾಗಿ ನೆರವೇರಿದೆ. ಆ.29ರಿಂದ ಮೂರು ದಿನಗಳ ಕಾಲ ಸಂಗೀತ ರಸ ಸಂಜೆ, ಕವಿ ಗೋಷ್ಠಿ, ನಾಟಕ, ನೃತ್ಯ ಪ್ರದರ್ಶನ, ಜಾನಪದ ಕಲೆ, ನಾಟಕ, ಕಥೆ ಹೇಳುವುದು, ಕಿರು ನಾಟಕ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಸಾವಿರಾರು ಅನಿವಾಸಿ ಕನ್ನಡಿಗರು ಭಾಗವಹಿಸಿ, ಸಂಭ್ರಮಿಸಿದರು.
ಶುಕ್ರವಾರ ಗಣೇಶನ ಪೂಜೆಯೊಂದಿಗೆ ಪ್ರಾರಂಭವಾಗಿ All OK ಸಂಗೀತ ಕಾರ್ಯಕ್ರಮದ ಯಶಸ್ವಿಯೇ ಮುಂದಿನ 2 ದಿನಗಳ ಕಾರ್ಯಕ್ರಮಗಳು ಸಮಾವೇಶದ ಯಶಸ್ಸಿಗೆ ನಾಂದಿಯಾಯಿತು. ಶನಿವಾರದಿಂದ ಎರಡೆರಡು ವೇದಿಕೆ ಮೇಲೆ ನಿರಂತರ ಕಾರ್ಯಕ್ರಮಗಳು ಜರುಗಿದವು. ಸಮಾವೇಶದಲ್ಲಿ ಭಾಗವಹಿಸಿದ ಕನ್ನಡಿಗರು ಗುಂಪು ಗುಂಪಾಗಿ ತಮ್ಮ ತಮ್ಮ ಸಂಘದ ಬಾವುಟಗಳೊಂದಿಗೆ ಹಾಡು, ಕುಣಿತಗಳಿಂದ ಮೆರವಣಿಗೆಯಲ್ಲಿ ಭಾಗವಹಿಸಿ ಅಭೂತಪೂರ್ವ ಯಶಸ್ಸಿಗೆ ಕಾರಣರಾದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಉದ್ಘಾಟನಾ ಮಾಡುವುದರೊಂದಿಗೆ, ಅನಿವಾಸಿ ಕನ್ನಡಿಗರ ಕನ್ನಡ ಪ್ರೀತಿ, ಕನ್ನಡ ಸಂಸ್ಕೃತಿಯನ್ನು ಸಂಭ್ರಮಿಸುವ ರೀತಿ ಕಂಡು ಬೆರಗಾದರು. ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡಿಗೆಯನ್ನು ಮೆಚ್ಚಿದರು. ಒಂದು ಮಂಟಪದಲ್ಲಿ ‘ಕನ್ನಡೋತ್ಸವ’, ‘ಕ್ಷೀರಾಮೃತ’ ‘ನಾವಿಕ ಪೇಜೆಂಟ್’ ದಂತಹ ಹಲವಾರು ಕಾರ್ಯಕ್ರಮಗಳೊಂದಿಗೆ ಮೆರುಗು ಕೊಟ್ಟರೆ, ಇನ್ನೊಂದು ಮಂಟಪದಲ್ಲಿ ನಡೆದ 2 ಹಾಸ್ಯ ನಾಟಕಗಳು ವೀಕ್ಷಕರನ್ನು ರಂಜಿಸಿತ್ತು. ನಾಟಕ ಕ್ಷೇತ್ರದ ದಿಗ್ಗಜರಾದ ಬಿ. ಸುರೇಶ್, ಸಿಹಿಕಹಿ ಚಂದ್ರು, ಶ್ರೀನಾಥ ವಸಿಷ್ಟ, ಸುಂದರ್ ವೀಣ ಹಾಗೂ ವೀಣ ಸುಂದರ್ ಅವರ ಅಭಿನಯ ವಿಕ್ಷಕರ ಮನಸ್ಸಿನಲ್ಲಿ ಇನ್ನೂ ಉಳಿದಿದೆ. ಸಂಜೆ ನಡೆದ ‘ಮನೋ ಸಂಗೀತ’ ಮನೋಮೂರ್ತಿಯವರ ಸಂಗೀತ ಕಾರ್ಯಕ್ರಮ ಕನ್ನಡಿಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.
