ಉದಯವಾಹಿನಿ, ನವದೆಹಲಿ: ದೇಶದ ತೆರಿಗೆ ವ್ಯವಸ್ಥೆಯಲ್ಲಿ ಅತಿದೊಡ್ಡ ಬದಲಾವಣೆಗೆ ಕೇಂದ್ರ ಮುಂದಾಗಿದೆ. 8 ವರ್ಷಗಳ ಬಳಿಕ ಜಿಎಸ್‌ಟಿ ವ್ಯವಸ್ಥೆಯಲ್ಲಿ ಪರಿಷ್ಕರಣೆಯಾಗಲಿದೆ. ಜಿಎಸ್‌ಟಿ ಮಂಡಳಿಯು ಇಂದಿನಿಂದ ಎರಡು ದಿನಗಳ ಸಭೆಯನ್ನು ಆರಂಭಿಸಲಿದೆ.ದಿನನಿತ್ಯದ ಅಗತ್ಯ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಸರಕುಗಳನ್ನು ಅಗ್ಗವಾಗಿಸುವ ಮತ್ತು ಆಯ್ದ ಐಷಾರಾಮಿ ವಸ್ತುಗಳ ಮೇಲೆ ಹೆಚ್ಚಿನ ಸುಂಕಗಳನ್ನು ಪರಿಚಯಿಸುವ ಮೂಲಕ ವ್ಯಾಪಕ ತೆರಿಗೆ ಪರಿಷ್ಕರಣೆಯ ವಿಚಾರ ಈಗಾಗಲೇ ಚರ್ಚೆಯ ಮೇಜಿನ ಮೇಲಿದೆ. ಸಭೆಯಲ್ಲಿ ಸ್ಲ್ಯಾಬ್ ಬದಲಾವಣೆ ಬಗ್ಗೆ ಬಹುಮತದಿಂದ ನಿರ್ಧಾರ ಕೈಗೊಳ್ಳಲಾಗುವುದು. ಕೌನ್ಸಿಲ್‌ನ ಒಪ್ಪಿಗೆಯ ನಂತರ ಹೊಸ ದರಗಳ ಕುರಿತಾದ ಅಧಿಸೂಚನೆಗಳು 5-7 ದಿನಗಳಲ್ಲಿ ಜಾರಿಗೊಳ್ಳಬಹುದು. ಹೊಸ ನಿಯಮಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.
ನಾಲ್ಕು ಸ್ಲ್ಯಾಬ್‌ಗಳ ಬದಲು ಎರಡು ಸ್ಲ್ಯಾಬ್‌ಗಳಿಗೆ ಇಳಿಕೆಗೆ ಕೇಂದ್ರ ಮುಂದಾಗಿದೆ. 5%, 12%, 18%, 28% ತೆರಿಗೆ ಪದ್ದತಿಗೆ ಪೂರ್ಣ ವಿರಾಮ ಹಾಕಿ, 5% ಮತ್ತು 18% ಸ್ಲ್ಯಾಬ್‌ಗಳನ್ನು ಉಳಿಸಿಕೊಳ್ಳಲು ಈಗಾಗಲೇ ಕೇಂದ್ರ ನಿರ್ಧರಿಸಿದೆ. 12% ವ್ಯಾಪ್ತಿಯಲ್ಲಿರುವ ಎಲ್ಲ ವಸ್ತುಗಳು 5% ಗೆ ಮತ್ತು 28% ನಲ್ಲಿರುವ ಎಲ್ಲ ವಸ್ತುಗಳ ತೆರಿಗೆಯನ್ನು 18% ಇಳಿಸಲು ತಿರ್ಮಾನಿಸಲಾಗಿದೆ. ಈ ಬಗ್ಗೆ ಈಗಾಗಲೇ ಸುಳಿವು ಕೂಡ ಸಿಕ್ಕಿದೆ.
ಇಂದಿನಿಂದ ಎರಡು ದಿನ ದೆಹಲಿಯಲ್ಲಿ ಜಿಎಸ್ಟಿ ಕೌನ್ಸಿಲ್ ಸಭೆ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ನೇತೃತ್ವ ವಹಿಸಲಿದ್ದಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 31 ಸದಸ್ಯರು ಭಾಗಿಯಾಗಲಿದ್ದಾರೆ. ಒಟ್ಟು 33 ಸದಸ್ಯರ ಸಮ್ಮುಖದಲ್ಲಿ ಜಿಎಸ್‌ಟಿ ವ್ಯವಸ್ಥೆಯ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಯಲಿದೆ. ಸಾಧಕ-ಬಾಧಕಗಳ ಬಳಿಕ ಬಹುಮತದ ಮೂಲಕ ನಿರ್ಧಾರ ಕೈಗೊಳ್ಳಲಾಗುವುದು.
ಜಿಎಸ್‌ಟಿ ಪರಿಷ್ಕರಣೆಗೆ ಈಗಾಗಲೇ ಬಹುತೇಕ ರಾಜ್ಯಗಳು ಸಮ್ಮತಿ ಸೂಚಿಸಿವೆ.
