ಉದಯವಾಹಿನಿ, ಹಾಸನ :  ಕೆಂಪೇಗೌಡ ಒಂದು ಜಾತಿ, ಸಮುದಾಯಕ್ಕೆ ಸೀಮಿತವಾದ ವ್ಯಕ್ತಿ ಅಲ್ಲ. ಅವರು ಇಡೀ ನಾಡಿನ ಒಲವು ಪಡೆದ ಮಹನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ. ಹಾಸನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ನಾಡ ಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬೆಂಗಳೂರು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರೆ ಅದಕ್ಕೆ ಕೆಂಪೇಗೌಡ ಅವರೇ ಮೂಲ ಕಾರಣ ಎಂದರು. ಕೆಂಪೇಗೌಡ ಅವರು ದೂರದೃಷ್ಟಿ ಯಿಂದ ನಾಡು ಕಟ್ಟಿದ್ದಾರೆ. ನಾಲ್ಕು ದಿಕ್ಕಿಗೂ ದ್ವಾರ ಮಾಡಿ ,ವೃತ್ತಿಗೊಂದು ಮಾರುಕಟ್ಟೆ ಸ್ಥಾಪಿಸಿ, ಕೆರೆ ಕಟ್ಟೆಗಳನ್ನು ಅಭಿವೃದ್ಧಿ ಮಾಡಿದ್ದರು ಎಂದರು. ದೇಶ ಅಥವಾ ರಾಜ್ಯದ ಅಭಿವೃದ್ಧಿಗೆ ಉದ್ಯಮ ಸೃಷ್ಟಿಯಾಗಬೇಕು ಆಗ ಉದ್ಯೋಗ ಹೆಚ್ಚಿ ವ್ಯಾಪಾರಾಭಿವೃದ್ದಿಯಾಗುತ್ತದೆ ಎಂದರು. ಇಂತಹ ಮಹನೀಯರು ಕೇವಲ ಜಾತಿ ವರ್ಗಗಳಿಗೆ ಸೀಮಿತವಾಗದೆ ಸಮಾಜದ ಸ್ವತ್ತಾಗಬೇಕು ಎಂಬುವ ಉದ್ದೇಶದಿಂದ ಇಂತಹ ಗಣ್ಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಯೋಜಿಸಲು ನಿರ್ಧಾರವನ್ನು ತಾವು ಹಿಂದಿನ ಅವಧಿಯಲ್ಲಿ ಮಾಡಿದ್ದಾಗಿ ಹೇಳಿದರು. ಇದೇ ರೀತಿ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಸರ್ಕಾರದಲ್ಲಿ ನಾಡ ಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಯಿತು. ಇದೇ ರೀತಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಐದು ಎಕರೆ ಜಾಗ ನೀಡಲಾಯಿತು ಎಂದು ಹೇಳಿದರು. ಇತಿಹಾಸ ಅರಿಯುವ ಮೂಲಕ ನಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಅದನ್ನು ತಿರುಚುವ ಕೆಲಸ ಮಾಡಬಾರದು ಎಂದು ಮುಖ್ಯ ಮಂತ್ರಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!