ಉದಯವಾಹಿನಿ,ಬೆಂಗಳೂರು: ರಾಜ್ಯದಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತತ್ತರಿಸಿಹೋಗಿದ್ದಾರೆ. ಇನ್ನು ಬೇಳೆ ಕಾಳುಗಳ ಬೆಲೆ ಏರಿಕೆ ಆಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ನಾಫೆಡ್ ಮತ್ತು ಎನ್‌ಸಿಸಿಎಫ್ ಸಂಸ್ಥೆಗಳಲ್ಲಿರುವ ಬೇಳೆ ಕಾಳುಗಳ ದಾಸ್ತಾನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಬೆಲೆ ಏರಿಕೆಯ ಹೊರೆಯನ್ನು ಇಳಿಕೆ ಮಾಡಲು ಮುಂದಾಗಿದೆ. ಜನಸಾಮಾನ್ಯರಿಗೆ ಸರ್ಕಾರದಿಂದ ಯಾವುದೇ ಉಚಿತ ಯೋಜನೆಗಳನ್ನು ಕೊಡದಿದ್ದರೂ ಪರವಾಗಿಲ್ಲ, ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗದಂತೆ ನಿಯಂತ್ರಣ ಮಾಡಿದರೆ ಸಾಕು ಎನ್ನುವಂತಾಗಿದೆ. ದಿನಬಳಕೆ ವಸ್ತುಗಳಾದ ತರಕಾರಿ, ಹಣ್ಣುಗಳು, ಅಕ್ಕಿ, ಬೇಳೆ ಕಾಳುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ. ಕಳೆದ 20 ದಿನಗಳ ಹಿಂದಿನ ಬೆಲೆಗೂ ಈಗಿರುವ ಬೆಲೆಗೂ ಶೆ.30 ರಿಂದ ಶೇ.50ರಷ್ಟು ಬೆಲೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಜನಸಮಾನ್ಯರು ಬೆಲೆ ಏರಿಕೆ ಬಿಸಿ ಅನುಭವಿಸುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರವೂ ಕೂಡ ವಿದ್ಯುತ್ ದರ ಏರಿಕೆ ಮಾಡಿ ಮತ್ತೊಂದು ಹೊಡೆತವನ್ನು ನೀಡಿದೆ.
