ಉದಯವಾಹಿನಿ,ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 2023ರ ಸಾಲಿನ ಪ್ರತಿಷ್ಠಿತ ದಿ ಆಷಸ್ ಟೆಸ್ಟ್ ಕ್ರಿಕೆಟ್ ಸರಣಿಯ 2ನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡ ತನ್ನ ಆಡುವ 11ರ ಬಳಗವನ್ನು ಒಂದು ದಿನ ಮೊದಲೇ ಪ್ರಕಟ ಮಾಡಿದೆ. ಪ್ರಥಮ ಟೆಸ್ಟ್ ವೇಳೆ ಕೈ ಬೆರಳಿನ ಗಾಯದ ಸಮಸ್ಯೆ ಎದುರಿಸಿದ್ದ ಸ್ಟಾರ್ ಆಲ್‌ರೌಂಡರ್ ಮೊಯೀನ್ ಅಲಿ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟಿರುವ ಇಂಗ್ಲೆಂಡ್, ಅವರ ಜಾಗಕ್ಕೆ ಯುವ ವೇಗದ ಬೌಲರ್ ಜಾಶ್ ಟಂಗ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ನಿವೃತ್ತಿಯಿಂದ ಹಜೊರಬಂದು ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದ ಮೊಯೀನ್ ಅಲಿ, ಗಾಯದ ಸಮಸ್ಯೆ ಕಾರಣ ಪ್ರಥಮ ಟೆಸ್ಟ್‌ನಲ್ಲಿ ಪರಿಣಾಮ ಕಾರಿ ಪ್ರದರ್ಶನ ನೀಡಲು ವಿಫಲರಾದರು. ಇನ್ನು ಎರಡನೇ ಟೆಸ್ಟ್‌ಗೆ ಆತಿಥ್ಯ ವಹಿಸಿರುವ ದಿ ಲಾರ್ಡ್ಸ್ ಕ್ರೀಡಾಂಗಣದ ಪಿಚ್ ವೇಗದ ಬೌಲರ್‌ಗಳಿಗೆ ನೆರವಾಗುತ್ತದೆ.
ಸ್ಪಿನ್ನರ್‌ಗಳಿಗೆ ಇಲ್ಲಿ ಕವಡೆ ಕಿಮ್ಮತ್ತಿಲ್ಲ ಎಂಬುದನ್ನು ಅರಿತ ಇಂಗ್ಲೆಂಡ್ ಟೀಮ್ ಮ್ಯಾನೇಜ್ಮೆಂಟ್ ಅಲಿ ಅವರನ್ನು ಹೊರಗಿಟ್ಟು ಸಂಪೂರ್ಣ ವೇಗಿಗಳ ಬೌಲಿಂಗ್ ಬಳಗವನ್ನು ಕಣಕ್ಕಿಳಿಸಲು ಮುಂದಾಗಿದೆ. ನಾಯಕ ಬೆನ್ ಸ್ಟೋಕ್ಸ್ ಜೊತೆಗೆ 4 ವೇಗಿಗಳು ಎರಡನೇ ಟೆಸ್ಟ್‌ನಲ್ಲಿ ಆಡಲಿದ್ದಾರೆ. ಈ ನಡುವೆ ಅನುಭವಿಗಳಾದ ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್ ಕೂಡ ಸ್ಥಾನ ಪಡೆಯಲು ವಿಫಲರಾಗಿದ್ದು, ಅಗತ್ಯ ಬಿದ್ದರೆ ಸಾಂದರ್ಭಿಕ ಸ್ಪಿನ್ನರ್ ಆಗಿ ಮಾಜಿ ನಾಯಕ ಜೋ ರೂಟ್ ತಮ್ಮ ಕೈಚಳಕ ಪ್ರದರ್ಶಿಸಲಿದ್ದಾರೆ.
