ಉದಯವಾಹಿನಿ, ಚಾಮರಾಜನಗರ: ಹುಲಿ ಸೆರೆಹಿಡಿಯಲು ವಿಫಲವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ (Forest Department) ಸಿಬ್ಬಂದಿಯನ್ನೇ ಗ್ರಾಮಸ್ಥರು ಬೋನಿಗೆ ಕೂಡಿ ಹಾಕಿ ಬಿಸಿ ಮುಟ್ಟಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.ಕಳೆದ ಒಂದು ತಿಂಗಳ ಹಿಂದೆ ಗ್ರಾಮದ ಜಮೀನಿನಲ್ಲಿ ಹುಲಿ ಸಂಚಾರವಾಗಿತ್ತು. ಗ್ರಾಮಸ್ಥರ ಒತ್ತಡದ ಬಳಿಕ ಅರಣ್ಯ ಇಲಾಖೆ ಬೋನು ಅಳವಡಿಸಿತ್ತು. ಆದರೆ ಹುಲಿ ಮಾತ್ರ ಬೋನಿಗೆ ಬೀಳಲಿಲ್ಲ. ಈ ಹುಲಿಯಿಂದ ನಮಗೆ ಬಹಳ ಕಷ್ಟವಾಗುತ್ತಿದೆ. ಪ್ರಶ್ನೆ ಕೇಳಿದರೆ ಹುಲಿ ಹಿಡಿಯುತ್ತೇವೆ ಎಂದು ಹೇಳಿ ಏನು ಮಾಡುವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದಾಗ ಬೋನಿನ ಒಳಗಡೆ ಕೂಡಿಹಾಕಿ ಪ್ರತಿಭಟಿಸಿದ್ದಾರೆ. ಮೇಲಾಧಿಕಾರಿಗಳು ಬರುವವರೆಗೂ ನಾವು ಈ ಬೋನಿನ ಬಾಗಿಲು ತೆಗೆಯುವುದಿಲ್ಲ ಎಂದು ಹಠ ಹಿಡಿದಿದ್ದಾರೆ.
