ಉದಯವಾಹಿನಿ, ಯಾದಗಿರಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಉತ್ತರದ ಹಲವು ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ನಿನ್ನೆ ಯಾದಗಿರಿಯಲ್ಲಿ ಸುರಿದ ಮಳೆಯು 30 ಕುಟುಂಬದ ಜನರನ್ನು ಬೀದಿಗೆ ತಂದಿದೆ.ಯಾದಗಿರಿಯಲ್ಲಿ ವರುಣ ಅಬ್ಬರಿಸಿ ಬೊಬ್ಬರಿದಿದ್ದು, ಭಾರಿ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಇದರಿಂದ ಜನರ ಕಂಗಾಲಾಗಿ ಹೋಗಿದ್ದಾರೆ. ತಡರಾತ್ರಿಯಿಂದ ಸುರಿದ ಭಾರಿ ಮಳೆಯಿಂದಾಗಿ ಯರಗೋಳ ಗ್ರಾಮದ ಸೇತುವೆ, ಹಾಗೂ ಬಾಚವಾರ ಗ್ರಾಮದ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ವಾಹನ ಸಂಚಾರ ಅಡ್ಡಿಯಾಗಿದ್ದು ಜನರು ಪರದಾಡಿದ್ದಾರೆ.
ಇನ್ನು ಯರಗೋಳ ಕೆರೆ ನೀರು ಗ್ರಾಮಕ್ಕೆ ನುಗ್ಗಿದ್ದು ಗ್ರಾಮದ 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಇದರಿಂದ ಮನೆಯಲ್ಲಿದ್ದ ಧವಸ ಧಾನ್ಯ ಹಾಗೂ ಇನ್ನಿತರ ವಸ್ತುಗಳು ಹಾನಿಹಾಗಿದ್ದು ಜನರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಇನ್ನು ಬಾಚವಾರ ಗ್ರಾಮದ ಸೇತುವೆ ಮುಳುಗಡೆ ಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ. ಇದರಿಂದ ಗ್ರಾಮದಲ್ಲಿರುವ ಸೇತುವೆಯನ್ನು ಎತ್ತರಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
ಇತ್ತ ಕಲಬುರಗಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಹಿನ್ನೆಲೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆಳಂದ ತಾಲ್ಲೂಕಿನ ಪಡಸಾವಳಿಯಲ್ಲಿ ರಸ್ತೆ ಭಾರಿ ಮಳೆಗೆ ಕೊಚ್ಚಿ ಹೋಗಿದ್ದು ಮಣ್ಣೂರ-ಅಫಜಲಪುರ ತೆರಳುವ ರಸ್ತೆ ಸಂಚಾರ ಬಂದ್ ಆಗಿದೆ. ಇದರಿಂದ ಜನರು ಸಂಚಾರ ಮಾಡಲಾಗದೆ ಪರದಾಡಿದರು.
