ಉದಯವಾಹಿನಿ, ಪರಭಾಷಾ ಸಿನಿಮಾಗಳ ಹಾವಳಿ, ಮಿತಿ ಮೀರಿದ ಟಿಕೆಟ್ ದರದ ವಿರುದ್ಧ ಇಡೀ ಇಂಡಸ್ಟ್ರಿ ಏಕರೂಪ ಟಿಕೆಟ್ ದರ ನಿಗದಿ ಮಾಡಬೇಕು ಎಂದು ದಶಕಗಳಿಂದ ಹೋರಾಟ ನಡೆಸಿತ್ತು. ಹತ್ತಾರು ಬಾರಿ ಈ ವಿಚಾರವಾಗಿ ಚರ್ಚೆ, ವಾದ- ಪ್ರತಿವಾದಗಳು ನಡೆದಿದ್ದವು. ಇದೀಗ ರಾಜ್ಯ ಸರ್ಕಾರ ಏಕರೂಪದ ಟಿಕೆಟ್ ದರ ನಿಗದಿ ಮಾಡಿದ್ದು, ಗರಿಷ್ಠ ಟಿಕೆಟ್ ದರ 200 ರೂಪಾಯಿಗೆ ನಿಗದಿ ಪಡಿಸಿದೆ. ಇದು ಒಂದೆಡೆ ಖುಷಿಯ ವಿಚಾರವಾದ್ರೆ, ಮತ್ತೊಂದೆಡೆ ಬಿಗ್ ಬಜೆಟ್ ಸಿನಿಮಾಗಳಿಗೆ ತೊಂದರೆ ಬಿಗಡಾಯಿಸೋ ಸೂಚನೆ ಕೊಟ್ಟಿದೆ. ಹೀಗಾಗಿ ಇಂಡಸ್ಟ್ರಿಯ ಒಳಗೆಯೇ ಪರ- ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿದೆ.
ಏಕರೂಪದ ಟಿಕೆಟ್ ದರದಿಂದ ಬಿಗ್ ಬಜೆಟ್ ಸಿನಿಮಾಗಳಿಗೆ ನಷ್ಟವಾಗೋ ಭಯ ಕಾಡುತ್ತಿದೆ. ಸ್ಯಾಂಡಲ್ವುಡ್ನಲ್ಲೀಗ ಬ್ಯಾಕ್ ಟು ಬ್ಯಾಕ್ ದೊಡ್ಡ ಬಜೆಟ್ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಇಡೀ ದೇಶವೇ ಸ್ಯಾಂಡಲ್ವುಡ್ ಕಡೆ ನೋಡುವಂತಹ, ಹೈ ಬಜೆಟ್, ಹೈ ಕ್ವಾಲಿಟಿ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಈ ಪಟ್ಟಿಯಲ್ಲಿ ಕಾಂತಾರ ಚಾಪ್ಟರ್ 1, ಟಾಕ್ಸಿಕ್, ಕೆಡಿ, 45, ದಿ ಡೆವಿಲ್, ಮಾರ್ಕ್.. ಹೀಗೆ ಸಾಲು ಸಾಲು ಸಿನಿಮಾಗಳಿವೆ.
ಈ ಚಿತ್ರಗಳಿಗೆ ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಲಾಗಿದ್ದು, ಈಗ ಏಕರೂಪದ ಬೆಲೆ ನಿಗದಿಯಿಂದ ನಿರ್ಮಾಪಕರಿಗೆ ನಷ್ಟವಾಗೋ ಭಯ ಕಾಡುತ್ತಿದೆ. ಇದಕ್ಕೆ ನಾನಾ ಕಾರಣಗಳೂ ಇವೆ. ಮೊದಲಿಗೆ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ. ಮತ್ತೊಂದೆಡೆ ವ್ಯಾವಹಾರಿಕ ಹಿನ್ನೆಲೆಯಲ್ಲಿ ನೋಡೋದಾದ್ರೆ ಬಂಡವಾಳ ರಿಕವರ್ ಮಾಡೋದೇ ದೊಡ್ಡ ತಲೆ ನೋವಾಗಿದೆ. ಒಂದೆಡೆ ಸ್ಯಾಟಲೈಟ್ ರೈಟ್ಸ್ ಖರೀದಿಸೋದು ಕಮ್ಮಿಯಾಗ್ತಿದ್ರೆ, ಮತ್ತೊಂದೆಡೆ ಓಟಿಟಿ ವೇದಿಕೆಗಳು ಕನ್ನಡ ಸಿನಿಮಾಗಳಂದ್ರೆ ದೂರ ಹೋಗುತ್ತಿವೆ. ಹೀಗಾಗಿ ಥಿಯೇಟರ್ನಿಂದ ಕಲೆಕ್ಟ್ ಹಣವನ್ನೇ, ನಿರ್ಮಾಪಕರು ನಂಬಿದ್ದಾರೆ. ಹೀಗಾಗಿ ಏಕರೂಪದ ಟಿಕೆಟ್ ದರ ನಿಗದಿ ವಿಚಾರವಾಗಿ ಅಪಸ್ವರ ಕೇಳಿ ಬಂದಿದ್ದು, ಒಂದಷ್ಟು ದೊಡ್ಡ ಪ್ರೊಡಕ್ಷನ್ ಹೌಸ್ಗಳು ಈ ವಿಚಾರವಾಗಿ ಫಿಲ್ಮ್ ಚೇಂಬರ್ ಮೆಟ್ಟಿಲೇರುವ ಸಾಧ್ಯತೆಯಿದೆ.
