ಉದಯವಾಹಿನಿ, ಬೆಂಗಳೂರಲ್ಲಿ : ಒಂದು ಸೈಟ್​ ತಗೋಬೇಕು, ಸಣ್ಣದೊಂದು ಮನೆ ಕಟ್ಟಬೇಕು ಅನ್ನೋ ಕನಸು ಹಲವರದ್ದು. ಹೇಗೋ ಮಾಡಿ ದುಡಿದ ದುಡ್ಡಲ್ಲೇ ಒಂದು 30×40 ಸೈಟ್​ ಅಂತೂ ಪರ್ಚೇಸ್​​​ ಮಾಡ್ತೀವಿ. ಆದರೆ, ಆ ಸೈಟ್​ನಲ್ಲಿ ಮನೆ ಕಟ್ಟಬೇಕು ಅಂದ್ರೆ ಹತ್ತಾರು ರೂಲ್ಸ್​​. ಈಗ ನೀವು ಬೆಂಗಳೂರಲ್ಲಿ 30×40 ಸೈಟ್​ನಲ್ಲಿ ಮನೆ ಕಟ್ಟೋದಾದ್ರೆ ರೂಲ್ಸ್​​ ತಲೆನೋವಿಲ್ಲ. ಅಂಥದ್ದೊಂದು ಗುಡ್​ನ್ಯೂಸ್​​ ಸರ್ಕಾರ ಕೊಟ್ಟಿದೆ.

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ 1200 ಚದರ ಅಡಿ ನಿವೇಶನಗಳಲ್ಲಿ ನಿರ್ಮಾಣಗೊಂಡಿರುವ ಮಹಡಿಗಳು ಮತ್ತು ಹೊಸದಾಗಿ ನಿರ್ಮಿಸುವ ವಾಸದ ಕಟ್ಟಡಗಳಿಗೆ ಯಾವುದೇ ಸ್ವಾಧೀನಾನುಭವ ಪ್ರಮಾಣಪತ್ರ ಬೇಡ ಅಂತ ಸರ್ಕಾರ ಆದೇಶಿಸಿದೆ. ವಾಸಯೋಗ್ಯ ಪ್ರಮಾಣಪತ್ರ ಅಂದ್ರೆ ಒಸಿ ವಿನಾಯಿತಿ ನೀಡುವ ಸರ್ಕಾರದ ಮಹತ್ವದ ಆದೇಶವೂ ಬೆಂಗಳೂರಿಗರಿಗೆ ಸಂತಸ ತಂದಿದೆ.
30×40 ಸೈಟ್​ನಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಿಸಿರೋ ಮತ್ತು ನಿರ್ಮಿಸುವ ನೆಲಮಹಡಿ ಸಹಿತ ಎರಡು ಅಂತಸ್ತು ಅಥವಾ ಬೇಸ್​ಮೆಂಟ್ ಸಹಿತ 3 ಮಹಡಿ ಕಟ್ಟಡಕ್ಕೆ ಒಸಿ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಕುಡಿಯುವ ನೀರು ಮತ್ತು ವಿದ್ಯುತ್‌ ಸಂಪರ್ಕ ಪಡೆಯಲು ಇದು ಸಹಕಾರಿಯಾಗಲಿದೆ.
ಇಷ್ಟೇ ಅಲ್ಲದೆ, ಒಸಿ ವಿನಾಯಿತಿ ನೀಡಿರೋ ರೆಸಿಡೆನ್ಷಿಯಲ್​ ಕಟ್ಟಡಗಳಿಗೆ ಆರಂಭಿಕ ಪ್ರಮಾಣ ಪತ್ರ (ಸಿಸಿ) ಪಡೆಯುವ ಅಗತ್ಯವೂ ಇಲ್ಲ ಅಂತ ಮೂಲಗಳು ಹೇಳಿವೆ. ಹಾಗಾಗಿ ನಿವೇಶನದಾರರಿಗೆ ಒಸಿ ಮತ್ತು ಸಿಸಿ ಎರಡರಿಂದಲೂ ವಿನಾಯಿತಿ ಸಿಕ್ಕಂತಾಗಲಿದೆ.
ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ 2024ರ ಸೆಕ್ಷನ್‌ ಪ್ರಕಾರ ಸ್ವಾಧೀನಾನುಭವ ಪ್ರಮಾಣಪತ್ರದಿಂದ ವಿನಾಯಿತಿ ನೀಡುವ ಅಧಿಕಾರ ಸರ್ಕಾರಕ್ಕೆ ಇದೆ. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!