ಉದಯವಾಹಿನಿ,ಸೋಲ್: ದಕ್ಷಿಣ ಕೊರಿಯಾದ ಜನರು ಒಂದು ಅಥವಾ ಎರಡು ವರ್ಷಗಳಷ್ಟು ವಯಸ್ಸು ಇಳಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಕೊರಿಯಾದ ಜನರಲ್ಲಿ ಹೊಸ ಉತ್ಸಾಹ ಮೂಡಿದೆ. ಕಾರಣ ಅಲ್ಲಿ ಆಬಾಲ ವೃದ್ಧರೆಯಾಗಿ ಎಲ್ಲರ ವಯಸ್ಸೂ 1- 2 ವರ್ಷ ಕಡಿಮೆಯಾಗಿದೆ. ದೇಶದ ಎರಡು ಸಾಂಪ್ರದಾಯಿಕ ವಯೋ- ಲೆಕ್ಕಾಚಾರದ ವಿಧಾನಗಳನ್ನು ಅಂತಾರಾಷ್ಟ್ರೀಯ ಮಾನದಂಡಗಳ ಜತೆಗೆ ಸೇರಿಸುವ ಹೊಸ ಕಾನೂನನ್ನು ದಕ್ಷಿಣ ಕೊರಿಯಾ ಅಳವಡಿಸಿದೆ. ಇದರ ಅನ್ವಯ ದಕ್ಷಿಣ ಕೊರಿಯಾ ಜನರ ವಯಸ್ಸು ಒಂದೆರಡು ವರ್ಷ ಕಡಿಮೆಯಾಗುತ್ತಿದೆ. ಸಾಮಾನ್ಯವಾಗಿ ಮಗು ಜನಿಸಿದ ದಿನವನ್ನು ಅದರ ಹುಟ್ಟಿದ ದಿನ ಎಂದು ಗುರುತಿಸಲಾಗುತ್ತದೆ. ಆದರೆ ದಕ್ಷಿಣ ಕೊರಿಯಾದ ಒಂದು ಸಾಂಪ್ರದಾಯಿಕ ವಿಧಾನದಲ್ಲಿ ತಾಯಿಯ ಗರ್ಭದಲ್ಲಿ ಇರುವಾಗಲೇ ಮಗುವಿನ ವಯಸ್ಸನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಇದರ ಪ್ರಕಾರ ಮಗು ಜನಿಸುವಾಗಲೇ ಅದಕ್ಕೆ ಒಂದು ವರ್ಷ ಎಂದು ಪರಿಗಣಿಸಲಾಗುತ್ತದೆ. ಈ ಪುರಾತನ ಪದ್ಧತಿಯನ್ನು ದಕ್ಷಿಣ ಕೊರಿಯಾ ರದ್ದುಗೊಳಿಸಿದೆ.
