ಉದಯವಾಹಿನಿ, ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಚಳವಳಿಯ ನಾಯಕ ಯಾಸಿನ್ ಮಲಿಕ್ ಒಂದು ಸಂದರ್ಭದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ಮುಂದೆ ತಮ್ಮ ಪ್ರಾಣ ಭಿಕ್ಷೆ ಬೇಡಿದ್ದನು. ಇದು 2013ಕ್ಕೂ ಮೊದಲು ನಡೆದ ಘಟನೆ. ಆಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳವಳಿಯಲ್ಲಿ ತೀವ್ರವಾಗಿ ನಡೆಯುತ್ತಿತ್ತು ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ.
ಯಾಸಿನ್ ಮಲಿಕ್ ಹತ್ಯೆಗೆ ಸೋಪೋರ್‌ನ ಲಷ್ಕರ್ ಕಾರ್ಯಕರ್ತ ಹಿಲಾಲ್ ದಾರ್ ಅನ್ನು 2012ರಲ್ಲಿ ನಿಯೋಜಿಸಲಾಗಿತ್ತು. ಐಎಸ್‌ಐ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ದಾರ್ ಶ್ರೀನಗರದ ಮೈಸುಮಾ ಪ್ರದೇಶದ ಮಕ್ಬೂಲ್ ಮಂಜಿಲ್‌ನಲ್ಲಿರುವ ಮಲಿಕ್‌ನ ನಿವಾಸದ ಮೇಲೆ ಕಣ್ಣಿಟ್ಟಿದ್ದನು.
ಭಾರತೀಯ ಗುಪ್ತಚರ ಏಜೆನ್ಸಿಗಳೊಂದಿಗೆ ಮಲಿಕ್ ಕೆಲಸ ಮಾಡುತ್ತಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದ ಪಾಕಿಸ್ತಾನ ಆತನ ಕೊಲೆಗೆ ಸಂಚು ರೂಪಿಸಿತ್ತು. ಮಲಿಕ್ ಅವರ ಆಪ್ತ ಮೊಲ್ವಿ ಶೋಕತ್ ನಿವಾಸದ ಬಳಿ ಉಂಟಾದ ಸ್ಫೋಟದಲ್ಲಿ ಸಾವನ್ನಪ್ಪಿದ್ದರಿಂದ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್) ನಾಯಕ ಮಲಿಕ್ ಮೇಲೆ ಪಾಕಿಸ್ತಾನದ ಅನುಮಾನ ಹೆಚ್ಚಾಗಿತ್ತು ಎಂದು ಮೂಲಗಳು ತಿಳಿಸಿವೆ. 2012ರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಸುಳಿವಿನ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ದಾರ್ ನನ್ನು ಬಂಧಿಸಲಾಗಿತ್ತು. ಆತ ಐಎಸ್‌ಐ-ಲಷ್ಕರ್ ಜಂಟಿಯಾಗಿ ಭಾರತದ ಗುಪ್ತಚರ ಬ್ಯೂರೋಗಾಗಿ ಕೆಲಸ ಮಾಡುತ್ತಿದ್ದ ಮಲಿಕ್ ನನ್ನು ತನ್ನ ಮೂಲಕ ಕೊಲೆ ಮಾಡಲು ಸಂಚು ರೂಪಿಸಿದ್ದಾಗಿ ಹೇಳಿಕೊಂಡಿದ್ದಾನೆ.
2013ರಲ್ಲಿ ಸಂಸತ್ತಿನ ಮೇಲೆ ದಾಳಿಯಾದಾಗ ಅಫ್ಜಲ್ ಗುರುವನ್ನು ಭಾರತದಲ್ಲಿ ಗಲ್ಲಿಗೇರಿಸಿದಾಗ ಪಾಕಿಸ್ತಾನದಲ್ಲಿದ್ದ ಮಲಿಕ್ ತಕ್ಷಣವೇ ಭಾರತದ ವಿರುದ್ಧ ಪ್ರತಿಭಟನೆಗಳನ್ನು ಸಂಘಟಿಸಿದ್ದನು. ಆಗ ಆತನೊಂದಿಗೆ ಲಷ್ಕರ್ ಸಂಸ್ಥಾಪಕ ಹಫೀಜ್ ಸಯೀದ್ ಕೂಡ ಇದ್ದನು. ಈ ಪ್ರತಿಭಟನೆಯ ಸಮಯದಲ್ಲಿ ಮಲಿಕ್ ಖಾಸಗಿಯಾಗಿ ಸಯೀದ್ ಬಳಿ ತನ್ನ ಪ್ರಾಣ ಭಿಕ್ಷೆ ಬೇಡಿದ್ದನು. ತಾನು ಇನ್ನು ಮುಂದೆ ಭಾರತೀಯ ಸಂಸ್ಥೆಗಳಿಗೆ ಯಾವುದೇ ಮಾಹಿತಿ ನೀಡುವುದಿಲ್ಲ ಬದಲಿಗೆ ಐಎಸ್‌ಐ ಆದೇಶಗಳನ್ನು ಪಾಲಿಸುತ್ತೇನೆ ಎಂದು ಭರವಸೆ ನೀಡಿದ್ದನು.
ಪಾಕಿಸ್ತಾನದಿಂದ ಮಲಿಕ್ ಭಾರತಕ್ಕೆ ಹಿಂದಿರುಗಿದ ಬಳಿಕ ಭಾರತ ಸರ್ಕಾರ ಆತನ ಪಾಸ್‌ಪೋರ್ಟ್ ಅನ್ನು ರದ್ದುಗೊಳಿಸಿತು. ಆತನ ಪತ್ನಿ ಪಾಕಿಸ್ತಾನಿ ಪ್ರಜೆ ಮುಷಾಲ್ ಮಲಿಕ್ ಗೂ ವೀಸಾ ನಿರಾಕರಿಸಲಾಯಿತು. ಇದಾದ ಬಳಿಕ ಸೈಯದ್ ಅಲಿ ಶಾ ಗಿಲಾನಿ ಮತ್ತು ಮಿರ್ವೈಜ್ ಉಮರ್ ಫಾರೂಕ್ ಅವರೊಂದಿಗೆ ಸೇರಿಕೊಂಡು ಮಲಿಕ್ ಜಂಟಿ ಪ್ರತಿರೋಧ ನಾಯಕತ್ವ (ಜೆಆರ್‌ಎಲ್) ಎಂಬ ಪ್ರತ್ಯೇಕತಾವಾದಿ ವೇದಿಕೆಯನ್ನು ಸ್ಥಾಪಿಸಿದ್ದು, ಬಳಿಕ ಸಾಮೂಹಿಕ ಪ್ರತಿಭಟನೆ, ಬಂದ್, ಕಲ್ಲು ತೂರಾಟಗಳನ್ನು ನಡೆಸಿ ಕಾಶ್ಮೀರದಲ್ಲಿ ಅನೇಕ ವರ್ಷಗಳ ಕಾಲ ಅಶಾಂತಿ ಉಂಟು ಮಾಡುವಂತೆ ಮಾಡಿದರು.
