
ಉದಯವಾಹಿನಿ, ಶಿಮ್ಲಾ: ಹಿಮಾಚಲ ಪ್ರದೇಶದಾದ್ಯಂತ ಭಾರೀ ಮಳೆ ಸಂಭವಿಸಿದೆ. ಮಳೆಯಿಂದಾಗಿ ಮಂಡಿಯಲ್ಲಿ ಮೇಘಸ್ಪೋಟವಾಗಿದ್ದು, ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಮನಾಲಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅವರಿಗೆ ಜನರು ತಮ್ಮ ದೂರುಗಳನ್ನು ಹೇಳಿದ್ದಾರೆ. ಆಗ ನಟಿ ಜನರ ಬಳಿಯೇ ಸಂಕಷ್ಟವನ್ನು ಹೇಳಿಕೊಂಡ ಘಟನೆ ನಡೆದಿದೆ. ಈ ವಿಪತ್ತನಿಂದಾಗಿ ನಾನೂ ಕಷ್ಟಕ್ಕೆ ಸಿಲುಕಿದೆ ಎಂದು ಅವರು ಹೇಳಿದರು. ಕಂಗನಾ ಬಳಿ ಮಾಧ್ಯಮದವರು ಸ್ವಲ್ಪ ಏರು ಧ್ವನಿಯಲ್ಲೇ ಪ್ರಶ್ನೆ ಮಾಡಿದರು. ಇದರಿಂದ ಕಂಗನಾ ಭಯಗೊಂಡರು. ‘ನೀವು ನನ್ನ ಮೇಲೆ ಅಟ್ಯಾಕ್ ಮಾಡೋಕೆ ಬಂದಿದ್ದೀರಾ ಅಥವಾ ಪ್ರಶ್ನೆ ಮಾಡುತ್ತಿದ್ದೀರಾ’ ಎಂದು ಕಂಗನಾ ಅವರು ಕೇಳಿದರು. ಆ ಬಳಿಕ ಅವರು ತಮ್ಮ ಕಷ್ಟ ಹೇಳಿಕೊಂಡರು.
ಸ್ಥಳೀಯರೊಂದಿಗೆ ಮಾತನಾಡಿದ ಅವರು, ನನ್ನ ಮನೆ ಮನಾಲಿಯಲ್ಲಿದೆ, ಮತ್ತು ನನ್ನ ರೆಸ್ಟೋರೆಂಟ್ ಕೂಡ ಇಲ್ಲಿಯೇ ಇದೆ. ನಿನ್ನೆ ನನ್ನ ರೆಸ್ಟೋರೆಂಟ್ ಕೇವಲ 50 ರೂ. ವ್ಯವಹಾರ ನಡೆಸಿದೆ. ಆದರೆ ನಾನು ಮಾಸಿಕ 15 ಲಕ್ಷ ರೂ. ಸಂಬಳವನ್ನು ಪಾವತಿಸಬೇಕಾಗಿದೆ. ನಾನು ಏನನ್ನು ಎದುರಿಸುತ್ತಿರಬಹುದು ಎಂದು ಊಹಿಸಿ. ನಾನು ಒಂಟಿ ಮಹಿಳೆ’ ಎಂದು ಕಂಗನಾ ಬೇಸರ ವ್ಯಕ್ತಪಡಿಸಿದರು.
ನಾನು ಕೂಡ ಒಂಟಿ ಮಹಿಳೆ, ಸಮಾಜದಲ್ಲಿ ಒಂಟಿ ಮಹಿಳೆಯಾಗಿ ಬದುಕುತ್ತಿದ್ದೇನೆ. ದಯವಿಟ್ಟು ನನ್ನ ಕಷ್ಟವನ್ನೂ ಅರ್ಥಮಾಡಿಕೊಳ್ಳಿ. ನನ್ನನ್ನು ಇಂಗ್ಲೆಂಡ್ ರಾಣಿ ಎಂದು ಭಾವಿಸಬೇಡಿ. ನಾನು ನನ್ನ ಸ್ವಂತ ಶ್ರಮದಿಂದ ಸಂಪಾದಿಸಿ ಬದುಕುವ ಮಹಿಳೆ ಎಂದು ಅವರು ಹೇಳಿದ್ದಾರೆ. ಪರಿಹಾರ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರ 10,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಮತ್ತು ಸ್ಥಳೀಯ ಅಧಿಕಾರಿಗಳು ಆ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ ಎಂದು ಸಂಸದೆ ಹೇಳಿದ್ದಾರೆ. ಮನಾಲಿಯ ಪಟ್ಲಿಕುಹಾಲ್‌ಗೆ ಕಂಗನಾ ರನೌತ್ ಭೇಟಿ ನೀಡಿದಾಗ ಪ್ರತಿರೋಧ ವ್ಯಕ್ತವಾಯಿತು, ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಾವುಟಗಳನ್ನು ಬೀಸುತ್ತಾ ಮತ್ತು “ಕಂಗನಾ ಗೋ ಬ್ಯಾಕ್” ಎಂದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
