ಉದಯವಾಹಿನಿ, ಭೋಪಾಲ್: ಮಧ್ಯಪ್ರದೇಶದಲ್ಲಿ ‘ಮೆಲಿಯಾಯಿಡೋಸಿಸ್’ ಎಂಬ ಮಾರಣಾಂತಿಕ ಬ್ಯಾಕ್ಟೀರಿಯಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈಗಾಗಲೇ 130ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಆರಂಭದಲ್ಲಿ ಗ್ರಾಮೀಣ ರೈತರನ್ನು ಕಾಡಿದ ಈ ಸೋಂಕು ಈಗ ನಗರ ಪ್ರದೇಶಗಳಲ್ಲೂ ಕಾಣಿಸಿಕೊಂಡಿದೆ.
ಬರ್ಕ್‌ಹೋಲ್ಡೇರಿಯಾ ಸೂಡೋಮಾಲೀ’ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಈ ಸೋಂಕು, ಮಣ್ಣು ಮತ್ತು ಕಲುಷಿತ ನೀರಿನಲ್ಲಿ ವಾಸಿಸುತ್ತದೆ. ಗಾಯಗಳು ಅಥವಾ ಉಸಿರಾಟದಿಂದ ಇದು ಹರಡುತ್ತದೆ. ವಿಶೇಷವಾಗಿ ಒದ್ದೆಯಾದ ಮಣ್ಣಿನಲ್ಲಿ ಕೆಲಸ ಮಾಡುವ ರೈತರಿಗೆ ಇದು ಹೆಚ್ಚಿನ ಅಪಾಯ ತಂದಿದೆ. ಶ್ವಾಸಕೋಶ, ಚರ್ಮಗಳ ಮೂಲಕ ಶುರುವಾಗುವ ಈ ಸೋಂಕು ಮೆದುಳಿನವರೆಗೆ ತಲುಪಬಹುದು.
ಇದರ ಲಕ್ಷಣಗಳು ಕ್ಷಯರೋಗದಂತೆ ಕಾಣುವುದರಿಂದ ತಪ್ಪಾದ ರೋಗನಿರ್ಣಯದ ಸಾಧ್ಯತೆ ಇದೆ. AIIMS ಭೋಪಾಲ್‌ನ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಆಯುಷ್ ಗುಪ್ತಾ, “ಈ ಸೋಂಕು ಈಗ ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿಲ್ಲ. ನಗರಗಳಲ್ಲೂ ಇದು ವೇಗವಾಗಿ ಹರಡುತ್ತಿದೆ” ಎಂದು ಎಚ್ಚರಿಸಿದ್ದಾರೆ. ಮಧುಮೇಹಿಗಳು, ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ಮತ್ತು ಮಿತಿಮೀರಿದ ಮದ್ಯಪಾನಿಗಳು ಈ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ.

ರೋಗ ಲಕ್ಷಣಗಳು
* ನಿರಂತರ ಜ್ವರ
* ಚರ್ಮದ ಮೇಲೆ ನೋವಿನ ಗುಳ್ಳೆಗಳು ಅಥವಾ ಗಾಯಗಳು
* ಕೆಮ್ಮು ಅಥವಾ ಉಸಿರಾಟದ ತೊಂದರೆ ಇತ್ಯಾದಿ

ಮುನ್ನೆಚ್ಚರಿಕೆ ಕ್ರಮಗಳು
* ಮಣ್ಣು ಅಥವಾ ನೀರಿನಲ್ಲಿ ಕೆಲಸ ಮಾಡುವಾಗ ರಕ್ಷಣಾತ್ಮಕ ಗೌನ್, ಕೈಗವಸು, ಬೂಟುಗಳನ್ನು ಧರಿಸಿ.
* ಮಧುಮೇಹಿಗಳು ರಕ್ತದ ಸಕ್ಕರೆಯನ್ನು ನಿಯಂತ್ರಣದಲ್ಲಿಡಿ.
* ಕಲುಷಿತ ಮಣ್ಣು ಅಥವಾ ನೀರಿನೊಂದಿಗೆ ನೇರ ಸಂಪರ್ಕ ತಪ್ಪಿಸಿ.
* ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ.
* ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಮೆಲಿಯಾಯಿಡೋಸಿಸ್ ಪರೀಕ್ಷೆಗೆ ಮಾಡಿಸಿ.

Leave a Reply

Your email address will not be published. Required fields are marked *

error: Content is protected !!