ಉದಯವಾಹಿನಿ, ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಆಡುತ್ತಿಲ್ಲ. ಅವರನ್ನು ಮೀಸಲು ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ. ಆದರೆ, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿ ಸೇರಿದಂತೆ ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಹೊರತಾಗಿಯೂ ಜೈಸ್ವಾಲ್‌ಗೆ ಭಾರತ ಟಿ20 ತಂಡದಲ್ಲಿ ನಿಯಮಿತವಾಗಿ ಅವಕಾಶಗಳು ಸಿಗುತ್ತಿಲ್ಲ. ಈ ಬಗ್ಗೆ ಯಶಸ್ವಿ ಜೈಸ್ವಾಲ್‌ ಪ್ರತಿಕ್ರಿಯಿಸಿದ್ದಾರೆ. ನನ್ನ ಸಮಯ ಬಂದೇ ಬರುತ್ತದೆ, ಅಲ್ಲಿಯವರೆಗೂ ನನ್ನ ಆಟದ ಕಡೆಗೆ ಗಮನ ಕೊಡುತ್ತೇನೆಂದು ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಹಾಗೂ ಗೌತಮ್‌ ಗಂಭೀರ್‌ ಭಾರತ ತಂಡಕ್ಕೆ ಹೆಡ್‌ ಕೋಚ್‌ ಆಗಿ ನೇಮಕವಾದ ಬಳಿಕ ಟಿ20ಐ ತಂಡದಲ್ಲಿ ಸಂಜು ಸ್ಯಾಮ್ಸನ್‌ ಮತ್ತು ಅಭಿಷೇಕ್‌ ಶರ್ಮಾ ಇನಿಂಗ್ಸ್‌ ಆರಂಭಿಸುತ್ತಿದ್ದಾರೆ. ಆದರೆ, ಏಷ್ಯಾ ಕಪ್‌ ಟೂರ್ನಿಯಲ್ಲಿ ಶುಭಮನ್‌ ಗಿಲ್‌ಗೆ ಉಪನಾಯಕತ್ವವನ್ನು ನೀಡಲಾಗಿದ್ದು, ಆರಂಭಿಕ ಸ್ಥಾನವನ್ನು ನೀಡಲಾಗಿದೆ. ಹಾಗಾಗಿ ಸಂಜುಸ ಸ್ಯಾಮ್ಸನ್‌ಗೆ ಮಧ್ಯಮ ಕ್ರಮಾಂಕದಲ್ಲಿಆಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಶಸ್ವಿ ಜೈಸ್ವಾಲ್‌ ಅವರನ್ನು ಮೀಸಲು ಆಟಗಾರರ ಪಟ್ಟಿಯಲ್ಲಿ ಉಳಿಸಲಾಗಿದೆ.

ಏಷ್ಯಾ ಕಪ್‌ ಭಾರತ ತಂಡದಲ್ಲಿ ಸ್ಥಾನ ಸಿಗದ ಬಗ್ಗೆ ಪ್ರತಿಕ್ರಿಯಿಸಿದ ಯಶಸ್ವಿ ಜೈಸ್ವಾಲ್‌, “ಇದೆಲ್ಲವೂ ಆಯ್ಕೆದಾರರ ಕೈಯಲ್ಲಿದೆ. ತಂಡದ ಸಂಯೋಜನೆಯ ಆಧಾರದ ಮೇಲೆ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆದರೆ, ನಾನು ಆಟದ ಕಡೆಗೆ ಗಮನ ಕೊಡುತ್ತೇನೆ ಹಾಗೂ ಏನು ಮಾಡಬೇಕೋ ಅದರ ಮೇಲೆ ಕೆಲಸ ಮಾಡುತ್ತೇನೆ. ನನ್ನ ಸಮಯ ಬಂದೇ ಬರುತ್ತದೆ. ಅಲ್ಲಿಯತನಕ ನಾನು ನನ್ನ ಕೆಲಸವನ್ನು ಮಾಡುತ್ತಾ ಇರುತ್ತೇನೆ. ಆ ಮೂಲಕ ನನ್ನ ಆಟದ ಸುಧಾರಣೆಗೆ ಗಮನ ಕೊಡುತ್ತೇನೆ ಎಂದು ಹೇಳಿದ್ದಾರೆ.

ಯಶಸ್ವಿ ಜೈಸ್ವಾಲ್ ಅವರ ಟಿ20 ಅಂತಾರಾಷ್ಟ್ರೀಯ ದಾಖಲೆಯು ಅವರ ಅರ್ಹತೆಯನ್ನು ಎತ್ತಿ ತೋರಿಸುತ್ತದೆ. ಅವರು ಆಡಿದ 23 ಪಂದ್ಯಗಳಲ್ಲಿ 723 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು 164.31ರ ಸ್ಟ್ರೈಕ್ ರೇಟ್‌ನಲ್ಲಿ ಐದು ಅರ್ಧಶತಕಗಳು ಮತ್ತು ಒಂದು ಶತಕ ಸೇರಿದಂತೆ 36.15 ರ ಸರಾಸರಿಯನ್ನು ಹೊಂದಿದ್ದಾರೆ. ತಂಡದ ಅಗ್ರಸ್ಥಾನದಲ್ಲಿರುವ ಅವರ ಆಕ್ರಮಣಕಾರಿ ಶೈಲಿಯು ಅವರನ್ನು ಭಾರತದ ಟಿ20 ಯೋಜನೆಗಳಿಗೆ ಸ್ವಾಭಾವಿಕವಾಗಿ ಹೊಂದಿಕೊಳ್ಳುವಂತೆ ಮಾಡುತ್ತದೆ, ಆದರೂ ತಂಡದ ತಂತ್ರವು ಪ್ರಸ್ತುತ ಸ್ಯಾಮ್ಸನ್, ಅಭಿಷೇಕ್ ಶರ್ಮಾ ಮತ್ತು ಗಿಲ್ ಒದಗಿಸಿದ ಅನುಭವ ಮತ್ತು ಇತ್ತೀಚಿನ ಫಾರ್ಮ್‌ನ ಮಿಶ್ರಣವನ್ನು ಬೆಂಬಲಿಸುತ್ತದೆ. ಭಾರತ ತಂಡ 2025ರ ಏಷ್ಯಾ ಕಪ್ ಅಭಿಯಾನವನ್ನು ಮುಂದುವರಿಸುತ್ತಿರುವಾಗ, ತಂಡವು ಬಲಿಷ್ಠವಾಗಿ ಕಾಣುತ್ತಿದೆ. ಭಾರತ ಗುಂಪು ಹಂತದ ಮೂರೂ ಪಂದ್ಯಗಳನ್ನು ಗೆದ್ದಿದೆ. ಆದಾಗ್ಯೂ, ಶುಭಮನ್ ಗಿಲ್ ಅವರ ಫಾರ್ಮ್‌ ಬಗ್ಗೆ ಪ್ರಶ್ನೆಗಳು ಎದ್ದಿವೆ. ಉಪನಾಯಕ ಟೂರ್ನಿಯಲ್ಲಿ ಇನ್ನೂ ಬ್ಯಾಟಿಂಗ್‌ನಲ್ಲಿ ಪ್ರಭಾವ ಬೀರಿಲ್ಲ. ಹಾಗಾಗಿ ಟೀಮ್‌ ಮ್ಯಾನೇಜ್‌ಮೆಂಟ್‌ ಮುಂದಿನ ಪಂದ್ಯಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!