ಉದಯವಾಹಿನಿ,ಹೈದರಾಬಾದ್: ಮೊಬೈಲ್ ಕಳ್ಳರ ಕಾಟಕ್ಕೆ ಯವ ಟೆಕ್ಕಿ ಬಲಿಯಾದ ದಾರುಣ ಘಟನೆ ಇದು. ರೈಲಿನ ಬಾಗಿಲ ಬಳಿ ಕುಳಿತಿದ್ದ ಸಾಫ್ಟ್‌ವೇರ್ ಎಂಜಿನಿಯರ್, ಕಳ್ಳರಿಂದ ತನ್ನ ಮೊಬೈಲ್ ಫೋನ್ ರಕ್ಷಿಸಿಕೊಳ್ಳುವ ಭರದಲ್ಲಿ ರೈಲಿನಿಂದ ಕೆಳಗೆ ಬಿದ್ದು ರೈಲಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ತೆಲಂಗಾಣದ ಬೀಬಿ ನಗರ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. 25 ವರ್ಷ ವಯಸ್ಸಿನ ಮುಪ್ಪ ಶ್ರೀಕಾಂತ್ ಸಾವನ್ನಪ್ಪಿದ್ದ ಸಾಫ್ಟ್‌ವೇರ್ ಎಂಜಿನಿಯರ್. ಇವರು ಸಿಕಂದರಾಬಾದ್‌ನಿಂದ ಶಾತವಾಹನ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಕಾಝಿಪೇಟೆ ರೈಲು ನಿಲ್ದಾಣದಲ್ಲಿ ಇವರು ಇಳಿಯಬೇಕಿತ್ತು. ಅಲ್ಲಿಂದ ಹನುಮಕೊಂಡ ಜಿಲ್ಲೆಯ ಕಮಲಾಪುರ ಮಂಡಲದ ನರೆಲ್ಲಾ ಎಂಬ ಗ್ರಾಮಕ್ಕೆ ಈತ ತೆರಳಬೇಕಿತ್ತು. ಸಿಕಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ಶ್ರೀಕಾಂತ್ ರೈಲು ಹತ್ತಿದ ಸಂದರ್ಭದಲ್ಲಿ ರೈಲು ಭರ್ತಿಯಾಗಿತ್ತು.
ಕುಳಿತುಕೊಳ್ಳಲು, ನಿಲ್ಲಲು ಜಾಗ ಇರಲಿಲ್ಲ. ಹೀಗಾಗಿ, ರೈಲಿನ ಕಂಪಾರ್ಟ್‌ಮೆಂಟ್ ಬಾಗಿಲಿನ ಬಳಿ ಶ್ರೀಕಾಂತ್ ಕುಳಿತು ಕೊಂಡಿದ್ದರು. ತೋಲಿ ಏಕಾದಶಿ ಹಬ್ಬಕ್ಕಾಗಿ ಶ್ರೀಕಾಂತ್ ತಮ್ಮ ಮನೆಗೆ ಹೊರಟಿದ್ದರು. ಈ ವೇಳೆ ಶ್ರೀಕಾಂತ್ ಅವರು ಮೊಬೈಲ್ ಹಿಡಿದಿದ್ದ ಕೈಗೆ ದೊಣ್ಣೆಯಿಂದ ಬಡಿದಂತಾಯ್ತು. ನೋಡಿದರೆ, ರೈಲಿನ ಹಳಿ ಬಳಿ ನಿಂತಿದ್ದ ಕಳ್ಳರು, ಶ್ರೀಕಾಂತ್ ಕೈಗೆ ದೊಣ್ಣೆಯಿಂದ ಬಡಿದು ಮೊಬೈಲ್ ಫೋನ್ ಕೆಳಗೆ ಬೀಳುವಂತೆ ಮಾಡಿದ್ದರು. ರೈಲು ಹೋದ ಬಳಿಕ ಕೆಳಗೆ ಬಿದ್ದ ಮೊಬೈಲ್ ಫೋನ್ ಅನ್ನು ಎತ್ತಿಕೊಳ್ಳೋದು ಕಳ್ಳರ ತಂತ್ರವಾಗಿತ್ತು. ಆದರೆ, ಮೊಬೈಲ್ ಫೋನ್ ತಮ್ಮ ಕೈನಿಂದ ಕೆಳಗೆ ಜಾರಿದ್ದೇ ತಡ, ಶ್ರೀಕಾಂತ್ ವಿಚಲಿತರಾದರು. ಹೇಗಾದರೂ ಮಾಡಿ ಕೆಳಗೆ ಬೀಳುತ್ತಿದ್ದ ತಮ್ಮ ಮೊಬೈಲ್ ಫೋನ್ ಅನ್ನು ರಕ್ಷಿಸಿಕೊಳ್ಳಬೇಕು ಎಂದು ಯತ್ನಿಸಿದ ಶ್ರೀಕಾಂತ್, ಕೆಳಗೆ ಬಗ್ಗಿದರು. ಶ್ರೀಕಾಂತ್ ಕೆಳಗೆ ಬಗ್ಗಿದ್ದೇ ನಿಯಂತ್ರಣ ಕಳೆದುಕೊಂಡರು. ನೇರವಾಗಿ ರೈಲಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಶ್ರೀಕಾಂತ್ ಸಾವನ್ನಪ್ಪಿಪ್ಪಿದ್ದಾರೆ.
