ಉದಯವಾಹಿನಿ,ಬೆಂಗಳೂರು: ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಉನ್ನತೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಹೊಸ ಬಸ್ ಖರೀದಿ, ಸಿಬ್ಬಂದಿ ನೇಮಕದ ಜತೆ ಆದಾಯ ಹೆಚ್ಚಳಕ್ಕೆ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ಒಟ್ಟಾರೆ 13 ಸಿಬ್ಬಂದಿ ನೇಮಕಕ್ಕೆ ಮುಂದಾಗಿದೆ. ಜತೆಗೆ ಒಂದು ಸಾವಿರಕ್ಕೂ ಅಧಿಕ ಡಿಸೇಲ್ ಹಾಗೂ ಎಲೆಕ್ಟ್ರಿಕ್ ಬಸ್ ಖರೀದಿ/ ಒಪ್ಪಂದಕ್ಕೆ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ರಾಮಲಿಂಗಾರೆಡ್ಡಿ ಅವರು, ” ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾಲ್ಕು ಸಾರಿಗೆ ಸಂಸ್ಥೆಗಳ ಆದಾಯ ಹೆಚ್ಚಳ, ಜನರಿಗೆ ಉತ್ತಮ ಸೇವೆಗಳನ್ನು ನೀಡಲು ನಿರ್ಧರಿಸಲಾಗಿದೆ, ಎಂದು ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿಯಲ್ಲಿ 3,745 ಚಾಲನಾ ಸಿಬ್ಬಂದಿಗಳು ಹಾಗೂ 726 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ ಈಗಾಗಲೇ ಕರೆಯಲಾಗಿದ್ದು, ಜಾಹೀರಾತು ಪ್ರಕ್ರಿಯೆಯನ್ನು ಮುಂದುವರೆಸಿ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಜತೆಗೆ ಹೊಸದಾಗಿ 1,433 ಚಾಲನಾ ಸಿಬ್ಬಂದಿಗಳ ಮತ್ತು 2,738 ತಾಂತ್ರಿಕ ಸಿಬ್ಬಂದಿಗಳನ್ನು ನೇರ ನೇಮಕಾತಿ ಮೂಲಕ ತುಂಬಲು ಸರ್ಕಾರದಿಂದ ಅನುಮತಿ ಪಡೆಯಲು ತೀರ್ಮಾನಿಸಲಾಗಿದೆ.
