ಉದಯವಾಹಿನಿ, ಬೆಂಗಳೂರು: ನಗರದ ರಸ್ತೆ ಗುಂಡಿಗಳು ಬಿಜೆಪಿ ಸರ್ಕಾರದ ದುರಾಡಳಿತದ ಫಲ, ರಸ್ತೆಗುಂಡಿಗಳನ್ನು ಮುಚ್ಚಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿಯೇ ಮುಖ್ಯಮಂತ್ರಿಗಳು 750 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಖ್ಯಾತ ಸಾಹಿತಿ ಎಸ್.ಎಲ್ ಬೈರಪ್ಪನವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ರಸ್ತೆಗುಂಡಿಗಳಿರುವುದು ನಿಜ. ಅವುಗಳನ್ನು ಮುಚ್ಚಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಎಲ್ಲೆಲ್ಲಿ ರಸ್ತೆಗುಂಡಿಗಳಿವೆ ಎಂದು ಮಾಹಿತಿ ನೀಡಿ ಎಂದು ಸಾರ್ವಜನಿಕರು, ಪೊಲೀಸರಿಗೆ ನಾನೇ ಮನವಿ ಮಾಡಿದ್ದೇನೆ. ಬಿಜೆಪಿ ಸರ್ಕಾರದ ದುರಾಡಳಿತದ ಪರಿಣಾಮವಾಗಿ ಈ ಪರಿಸ್ಥಿತಿ ಬಂದಿದೆ. ನಾವು ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ ಎಂಬುದನ್ನು ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ಅರ್ಥಮಾಡಿಕೊಳ್ಳಬೇಕು. ನಾವು ಕೇಂದ್ರಕ್ಕೆ ಹೆಚ್ಚಿನ ತೆರಿಗೆ ಪಾವತಿ ಮಾಡುತ್ತಿದ್ದರೂ ಅವರು ಅನುದಾನ ನೀಡಿಲ್ಲ. ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲೂ ಕೇಂದ್ರ ಸರ್ಕಾರದಿಂದ ಬೆಂಗಳೂರಿಗೆ ಸೂಕ್ತ ಅನುದಾನ ಸಿಕ್ಕಿಲ್ಲ. ಆದರೂ ನಾವು ಬೆಂಗಳೂರಿನ ಹಿತ ಕಾಪಾಡುತ್ತೇವೆ. ಬಿಜೆಪಿಗರು ಪ್ರತಿಭಟನೆ ಮಾಡಲಿ, ನಮ್ಮ ಕಾರ್ಯಕರ್ತರು ಬಿಜೆಪಿ ಆಡಳಿತದಲ್ಲಿರುವ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಇತರೆ ಪಾಲಿಕೆಗಳಲ್ಲಿರುವ ರಸ್ತೆಗುಂಡಿ ಸಮಸ್ಯೆ ಬಗ್ಗೆ ಪ್ರತಿಭಟಿಸಲಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!