ಉದಯವಾಹಿನಿ, ಮುಂಬೈ: ಬಾಲಿವುಡ್ ಹಿನ್ನೆಲೆ ಗಾಯಕ, ಕುಮಾರ್ ಸಾನು ಎಂದೇ ಜನಪ್ರಿಯರಾಗಿರುವ ಸಾನು ಕುಮಾರ್ ಭಟ್ಟಾಚಾರ್ಜಿ ತಮ್ಮ ಮಾಜಿ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ತಮ್ಮ ಖ್ಯಾತಿಗೆ ಹಾನಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಕ್ಷಮೆಯಾಚಿಸಬೇಕು ಮತ್ತು 50 ಕೋಟಿ ರುಪಾಯಿ ಪರಿಹಾರ ನೀಡುವಂತೆ ಕೋರಿದ್ದಾರೆ. ವಕೀಲೆ ಸನಾ ರಯೀಸ್ ಖಾನ್ ಮೂಲಕ ಸಲ್ಲಿಸಲಾದ ಈ ಮೊಕದ್ದಮೆಯಲ್ಲಿ, ಸಾನು ಮತ್ತು ಅವರ ಕುಟುಂಬದ ವಿರುದ್ಧ ಅವಹೇಳನಕಾರಿಯಾದ ಯಾವುದೇ ಹೇಳಿಕೆಗಳು ಅಥವಾ ಪೋಸ್ಟ್‌ಗಳನ್ನು ಮಾಡದಂತೆ ಅವರ ಮಾಜಿ ಪತ್ನಿ ರೀಟಾ ಭಟ್ಟಾಚಾರ್ಯ ಅವರಿಗೆ ಸೂಚಿಸಲಾಗಿದೆ.
ಇದರ ಜತೆಗೆ ಸಾನು ಅವರ ಮಾಜಿ ಪತ್ನಿ ರೀಟಾ, ಮೆಟಾ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳು ತಮ್ಮ ಸೈಟ್‌ಗಳಲ್ಲಿ ಈಗಾಗಲೇ ಪ್ರಕಟಿಸಿರುವ ಎಲ್ಲ ಅವಹೇಳನಕಾರಿ ಪೋಸ್ಟ್ ತೆಗೆದುಹಾಕುವಂತೆ ನಿರ್ದೇಶನ ನೀಡಲಾಗಿದೆ. ರೀಟಾ ಭಟ್ಟಾಚಾರ್ಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ವೈರಲ್ ಭಯಾನಿ ಮತ್ತು ಫಿಲ್ಮ್ ವಿಂಡೋಗೆ ನೀಡಿದ್ದ ಸಂದರ್ಶನದಲ್ಲಿ ಗರ್ಭಿಣಿಯಾಗಿದ್ದಾಗ ತನ್ನೊಂದಿಗೆ ಕುಮಾರ್ ಸಾನು ಕೆಟ್ಟದಾಗಿ ವರ್ತಿಸಿದ್ದರು ಎಂದು ಆರೋಪಿಸಿದ್ದರು. ತನಗೆ ಸರಿಯಾಗಿ ಆಹಾರ ನೀಡುತ್ತಿರಲಿಲ್ಲ. ಅಡುಗೆಮನೆಗೆ ಸೀಮಿತಗೊಳಿಸಿದ್ದರು ಮತ್ತು ವೈದ್ಯಕೀಯ ಆರೈಕೆಯನ್ನೂ ಪಡೆಯಲು ಬಿಟ್ಟಿರಲಿಲ್ಲ ಎಂದು ದೂರಿದ್ದರು.
